ಬೆಂಗಳೂರು: ರಾಜ್ಯದ ಪ್ರಸ್ತುತ ಆರ್ಥಿಕ ನಿರ್ಧಾರಗಳು, ಹಾಲಿನ ದರ ಏರಿಕೆ ಗೊಂದಲ, ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿತಿ ಹಾಗೂ ಗುತ್ತಿಗೆದಾರರ ಬಾಕಿ ಪಾವತಿ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಧ್ಯಮಗಳೊಂದಿಗೆ ಮಾತನಾಡಿ ವಿಸ್ತೃತ ಸ್ಪಷ್ಟನೆ ನೀಡಿದ್ದಾರೆ. ಗುತ್ತಿಗೆದಾರರ ಸಂಘದೊಂದಿಗೆ ನಡೆದ ಪ್ರಮುಖ ಸಭೆಯ ನಂತರ ಅವರು ಈ ಸಾರ್ವಜನಿಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
“ಡೀಸೆಲ್ ಕಾಸಿಗೂ ದುಡ್ಡಿರಲಿಲ್ಲ”: ₹700 ಕೋಟಿ ವಿಶೇಷ ಅನುದಾನ ಬಿಡುಗಡೆ!
ಡೀಸೆಲ್ ದರ ಏರಿಕೆಯ ಪರಿಣಾಮವಾಗಿ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಗಳ ನಿರ್ವಹಣೆಗೆ ಎದುರಾಗಿದ್ದ ತೀವ್ರ ಆರ್ಥಿಕ ಸವಾಲನ್ನು ಸರ್ಕಾರ ಮುಕ್ತವಾಗಿ ಒಪ್ಪಿಕೊಂಡಿದೆ. “ಒಂದು ಹಂತದಲ್ಲಿ ಬಸ್ಗಳಿಗೆ ಡೀಸೆಲ್ ಕಾಸು ಕೊಡಲು ದುಡ್ಡಿರಲಿಲ್ಲ,” ಎಂದು ಸನ್ನಿವೇಶವನ್ನು ವಿವರಿಸಿದ ಅವರು, ಸಾರ್ವಜನಿಕ ಸಾರಿಗೆಗೆ ಧಕ್ಕೆಯಾಗದಂತೆ ತಡೆಯಲು ಸರ್ಕಾರ ತಕ್ಷಣವೇ ₹700 ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಮಾಡಿದೆ ಎಂದರು. ಈ ಕ್ರಮದಿಂದ ಬಸ್ ಸಂಚಾರ ಪುನಃ ಸುಗಮವಾಗಿದೆ.
ಹಾಲಿನ ದರ ಏರಿಕೆಯಿಂದ 25 ಲಕ್ಷ ರೈತರಿಗೆ ಲಾಭ; ಮೊಸರಿನ ದರ ಏರಿಸದಂತೆ ಸೂಚನೆ!
ಹಾಲಿನ ಬೆಲೆ ಪರಿಷ್ಕರಣೆ ನಿರ್ಧಾರವು ರಾಜ್ಯದ 25 ಲಕ್ಷ ಹಾಲಿನ ಉತ್ಪಾದಕ ರೈತರಿಗೆ ನೇರವಾಗಿ ಅನುಕೂಲ ತಂದಿಕೊಟ್ಟಿದೆ. ಈ ಹಿಂದೆ ಎಲ್ಲಾ ಒಕ್ಕೂಟಗಳ ಅಧ್ಯಕ್ಷರು ಈ ನಿರ್ಧಾರವನ್ನು ಅಭಿನಂದಿಸಿದ್ದನ್ನು ನೆನಪಿಸಿದ ಅವರು, ರೈತರ ಜೀವನೋಪಾಯಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಮೊಸರಿನ ಬೆಲೆಯನ್ನು ಅತಿಯಾಗಿ ಹೆಚ್ಚಿಸದಂತೆ ಹಾಗೂ ಹೆಚ್ಚಾಗಿದ್ದರೆ ಅದನ್ನು ಇಳಿಸುವಂತೆ ಸಂಬಂಧಪಟ್ಟ ಆಡಳಿತ ಮಂಡಳಿಗೆ ಸೂಚಿಸಲಾಗಿದೆ. ನೀಲಿ ಹಾಗೂ ಆರೆಂಜ್ ಪ್ಯಾಕೆಟ್ಗಳ ಬೆಲೆ ವ್ಯತ್ಯಾಸವು ಹಾಲಿನಲ್ಲಿರುವ ಫ್ಯಾಟ್ (ಕೊಬ್ಬಿನ ಅಂಶ) ಆಧಾರದ ಮೇಲಿರುತ್ತದೆ. ಸಾಮಾನ್ಯ ಬಳಕೆಗೆ ₹7 ಮೊಸರು ಲಭ್ಯವಿದ್ದು, ₹12-14 ಏರಿಕೆಯಾಗಿದೆ ಎನ್ನುವುದು ಬರಿ ಗೊಂದಲ ಎಂದು ಸ್ಪಷ್ಟಪಡಿಸಿದರು.
“ಮುಂದಿನ 2 ವರ್ಷ ಕೆಲಸ ತಗೋಬೇಡಿ”: ಗುತ್ತಿಗೆದಾರರಿಗೆ ನೇರ ಮಾತು!
ರಾಜ್ಯದಲ್ಲಿ ಗುತ್ತಿಗೆದಾರರಿಗೆ ಪಾವತಿಸಬೇಕಿರುವ ₹38,000 ಕೋಟಿ ಬಾಕಿ ಇರುವುದನ್ನು ಒಪ್ಪಿಕೊಂಡ ಡಿಕೆಶಿ. ಗುತ್ತಿಗೆದಾರರ ಸಭೆಯಲ್ಲಿ ಅವರಿಗೆ ಮುಂದಿನ ಎರಡು ವರ್ಷ ಹೊಸ ಕೆಲಸಗಳನ್ನು ತಗೋಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಆದರೂ ಅಗತ್ಯವಿರುವ ಕೆಲವು ಪ್ರಮುಖ ಯೋಜನೆಗಳನ್ನು 6 ತಿಂಗಳೊಳಗೆ ಆರಂಭಿಸಲಾಗುವುದು. BBMP, ನೀರಾವರಿ ಹಾಗೂ ಇತರ ಇಲಾಖೆಗಳ ಯೋಜನೆಗಳು ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸರ್ಕಾರ ಈಗ ನಿಯಂತ್ರಣಕ್ಕೆ ತರುತ್ತಿದೆ. ಗುತ್ತಿಗೆದಾರರ ಹಲವು ನ್ಯಾಯಯುತ ಬೇಡಿಕೆಗಳನ್ನು ಒಪ್ಪಿಕೊಳ್ಳಲಾಗಿದೆ.” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಯೋಗೀಶ್ ಗೌಡ ಕೊಲೆ ಕೇಸ್: “ರಾಜಕೀಯ ಕೊಲೆಗಾರರು ತಪ್ಪಿಸಿಕೊಳ್ಳಬಾರದು!”; ಸುಪ್ರೀಂ ಕೋರ್ಟ್
ತಮ್ಮನ್ನು ಅಭಿನಂದಿಸುವ ಬದಲು ರೈತರು ಹಾಗೂ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವುದೇ ತಮ್ಮ ಮೊದಲ ಆದ್ಯತೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

