ಮಂಗಳೂರು: ಮಂಗಳೂರು ರೈಲ್ವೆ ಪ್ರದೇಶವನ್ನು ಮೈಸೂರು ರೈಲ್ವೆ ವಿಭಾಗದ ವ್ಯಾಪ್ತಿಗೆ ಸೇರಿಸಿದ ಬೆನ್ನಲ್ಲೇ ದಕ್ಷಿಣ ರೈಲ್ವೆ ಹಾಗೂ ನೈಋತ್ಯ ರೈಲ್ವೆ ಇಲಾಖೆಗಳು ರೈಲುಗಳ ವೇಳಾಪಟ್ಟಿಯನ್ನು ಭಾರಿ ಪ್ರಮಾಣದಲ್ಲಿ ಪರಿಷ್ಕರಣೆಗೊಳಿಸಿದ್ದು, ಕರಾವಳಿ ಭಾಗದ ಪ್ರಯಾಣಿಕರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ವಿಶೇಷವಾಗಿ ಮಂಗಳೂರು ಮತ್ತು ಬೆಂಗಳೂರು ನಡುವೆ ಸಂಚರಿಸುವ ಹಗಲು ವೇಳೆಯ ಪ್ರಮುಖ ರೈಲುಗಳ ಸಮಯವನ್ನು ಬದಲಾಯಿಸಿರುವುದು ಸಾಮಾನ್ಯ ಹಾಗೂ ಬಡ ಪ್ರಯಾಣಿಕರ ದಿನನಿತ್ಯದ ಪ್ರಯಾಣಕ್ಕೆ ಭಾರಿ ಹೊಡೆತ ನೀಡಿದೆ.
ಬದಲಾದ ಪ್ರಮುಖ ರೈಲುಗಳ ವೇಳಾಪಟ್ಟಿ ವಿವರ:
ಗೊಮ್ಮಟೇಶ್ವರ ಡೇ ಎಕ್ಸ್ಪ್ರೆಸ್ (ರೈಲು ಸಂಖ್ಯೆ 16576/16540):
ಹಳೆಯ ಸಮಯ: ಈ ಹಿಂದೆ ಬೆಳಿಗ್ಗೆ 7.00 ಗಂಟೆಗೆ ಮಂಗಳೂರು ಜಂಕ್ಷನ್ನಿಂದ ಹೊರಟು ಸಂಜೆ 4.30ಕ್ಕೆ ಯಶವಂತಪುರ ತಲುಪುತ್ತಿತ್ತು.
ಹೊಸ ಸಮಯ: ನೂತನ ವೇಳಾಪಟ್ಟಿಯಂತೆ ಈ ರೈಲು ಬೆಳಿಗ್ಗೆ 11.40ಕ್ಕೆ ಹೊರಡಲಿದ್ದು, ರಾತ್ರಿ 10.15ಕ್ಕೆ ಯಶವಂತಪುರ ತಲುಪಲಿದೆ.
ಯಶವಂತಪುರ–ಮಂಗಳೂರು ರೈಲು (16575/16539):
ಈ ರೈಲು ಪಡಿಲ್ ತಲುಪುವ ಸಮಯ ಸಂಜೆ 4.25ರ ಬದಲಾಗಿ ಸಂಜೆ 5.00 ಗಂಟೆಗೆ ಹಾಗೂ ಮಂಗಳೂರು ಜಂಕ್ಷನ್ ತಲುಪುವ ಸಮಯ ಸಂಜೆ 4.40ರ ಬದಲಾಗಿ ಸಂಜೆ 5.10ಕ್ಕೆ ಮುಂದೂಡಲ್ಪಟ್ಟಿದೆ.
ಯಶವಂತಪುರ–ಕಾರವಾರ ಎಕ್ಸ್ಪ್ರೆಸ್ (16515):
ಈ ರೈಲು ಕಾರವಾರವನ್ನು ರಾತ್ರಿ 10.45ರ ಬದಲಾಗಿ ರಾತ್ರಿ 11.30ಕ್ಕೆ ತಲುಪಲಿದೆ.
ಕಾರವಾರ–ಯಶವಂತಪುರ ಎಕ್ಸ್ಪ್ರೆಸ್ (16516):
ಕಾರವಾರದಿಂದ ಹೊರಡುವ ಈ ರೈಲು ಯಶವಂತಪುರವನ್ನು ರಾತ್ರಿ 8.50ರ ಬದಲಾಗಿ ರಾತ್ರಿ 10.15ಕ್ಕೆ ತಲುಪಲಿದೆ.
ವಂದೇ ಭಾರತ್ಗೆ ಆದ್ಯತೆ, ಸಾಮಾನ್ಯ ಪ್ರಯಾಣಿಕರಿಗೆ ಕುತ್ತು?:
ಯಶವಂತಪುರ-ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat) ರೈಲು ಮಂಗಳೂರು ಸೆಂಟ್ರಲ್ ಬದಲು ಮಂಗಳೂರು ಜಂಕ್ಷನ್ ಮಾರ್ಗವಾಗಿ ಸಂಚರಿಸಲು ಸಜ್ಜಾಗಿದೆ. ದುಬಾರಿ ಟಿಕೆಟ್ ದರದ ‘ವಂದೇ ಭಾರತ್’ ಓಡಿಸಲು ಅನುಕೂಲವಾಗುವಂತೆ, ಸಾಮಾನ್ಯ ಹಾಗೂ ಕಡಿಮೆ ದರದ ಬಜೆಟ್ ಸ್ನೇಹಿ ಗೊಮ್ಮಟೇಶ್ವರ ರೈಲನ್ನು ರಾತ್ರಿ ವೇಳೆಗೆ ತಳ್ಳಲಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ರಾತ್ರಿ 10.15ಕ್ಕೆ ಯಶವಂತಪುರ ತಲುಪಿದರೆ ಸಾರ್ವಜನಿಕ ಸಾರಿಗೆ (ಮೆಟ್ರೋ/ಬಸ್) ಸಿಗುವುದು ಕಷ್ಟವಾಗಲಿದ್ದು, ಬೆಂಗಳೂರು ನಗರದ ಒಳಗಿನ ಪ್ರಯಾಣಕ್ಕೆ ಆಟೋ, ಟ್ಯಾಕ್ಸಿಗಳಿಗೆ ಹೆಚ್ಚಿನ ಹಣ ತೆತ್ತು ಆರ್ಥಿಕ ಹೊರೆ ಅನುಭವಿಸಬೇಕಾಗುತ್ತದೆ ಎಂಬುದು ಪ್ರಯಾಣಿಕರ ಅಳಲಾಗಿದೆ.
ಇದನ್ನೂ ಓದಿ: ಬೆಂಗಳೂರು – ಮಂಗಳೂರು ರೈಲು ಪ್ರಯಾಣಿಕರ ಗಮನಕ್ಕೆ: ಯೇಡಕುಮಾರಿ-ಸಿರಿವಾಗಿಲು ಮಧ್ಯೆ ಗುಡ್ಡ ಕುಸಿತ
ರಾಜಕೀಯ ಸಂಚಲನ & ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಖಂಡನೆ:
ಇತ್ತೀಚೆಗಷ್ಟೇ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರೈಲ್ವೆ ಸಚಿವರನ್ನು ಭೇಟಿಯಾದ ಬೆನ್ನಲ್ಲೇ ಈ ವೇಳಾಪಟ್ಟಿ ಬದಲಾವಣೆಯಾಗಿರುವುದು ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ.
ಮತ್ತೊಂದೆಡೆ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ತಕ್ಷಣವೇ ಮನವಿ ಸಲ್ಲಿಸಿದ್ದು, “ಹೊಸದಾಗಿ ಪ್ರಸ್ತಾವಿತ ವೇಳಾಪಟ್ಟಿಯನ್ನು ತಕ್ಷಣವೇ ಕೈಬಿಟ್ಟು, ಸಾರ್ವಜನಿಕರ ಹಿತದೃಷ್ಟಿಯಿಂದ ಹಳೆಯ ವೇಳಾಪಟ್ಟಿಯನ್ನೇ ಮುಂದುವರಿಸಬೇಕು” ಎಂದು ಗಂಭೀರವಾಗಿ ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

