ಬೆಂಗಳೂರು: ದೇಶದಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಯುಪಿಐ (UPI) ವಹಿವಾಟುಗಳ ಮೇಲೆ ವಹಿವಾಟು ಶುಲ್ಕ (Transaction Charges) ವಿಧಿಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿರುವುದನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾಂಗ್ರೆಸ್ ಹಿರಿಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಟೀಕಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿ, 2025-26 ರಲ್ಲಿ ಯುಪಿಐ ಮೂಲಕ 314 ಲಕ್ಷ ಕೋಟಿ ರೂ. ಮೌಲ್ಯದ 24,162 ಕೋಟಿ ವಹಿವಾಟುಗಳು ನಡೆದಿವೆ. 2026-27ರಲ್ಲಿ ಇದು 400 ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆಯಿದೆ ಎಂದರು. 2,000 ಕ್ಕಿಂತ ಹೆಚ್ಚಿನ ಮರ್ಚೆಂಟ್ ವಹಿವಾಟುಗಳಿಗೆ (P2M) ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಶುಲ್ಕ ವಿಧಿಸಿದರೆ, ಆ ಹೆಚ್ಚುವರಿ ವೆಚ್ಚದ ಹೊರೆ ಅಂತಿಮವಾಗಿ ಸಣ್ಣ ವ್ಯಾಪಾರಿಗಳು ಹಾಗೂ ಗ್ರಾಹಕರ ಮೇಲೆಯೇ ಬೀಳಲಿದೆ.
ಯುಪಿಐ ನೆಟ್‌ವರ್ಕ್ ನಿರ್ವಹಿಸುವ ಎನ್‌ಪಿಸಿಐ (NPCI) ಸಂಸ್ಥೆಯು ತೆರಿಗೆ ಪೂರ್ವದಲ್ಲೇ ಬರೋಬ್ಬರಿ ₹1,900 ಕೋಟಿ ಲಾಭದಲ್ಲಿದ್ದು, ಭಾರಿ ನಗದು ಕಾಯ್ದಿರಿಸಿದೆ. ಬ್ಯಾಂಕುಗಳು ಈಗಾಗಲೇ ಆನ್‌ಲೈನ್ ವಹಿವಾಟುಗಳಿಂದ ಕೋಟ್ಯಂತರ ಆದಾಯ ಗಳಿಸುತ್ತಿರುವಾಗ, ಸಾರ್ವಜನಿಕರ ಮೇಲೆ ಹೊಸ ಶುಲ್ಕ ಹಾಕುವುದು ಏಕೆ ಎಂದು ಪ್ರಶ್ನಿಸಿದರು. ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾತನಾಡಿ, “ಒಂದೆಡೆ ಡಿಜಿಟಲ್, ಡಿಜಿಟಲ್ ಎಂದು ಪ್ರಚಾರ ಮಾಡುವ ಮೋದಿ ಸರ್ಕಾರ, ಈಗ ಯುಪಿಐ ಮೇಲೆ ಹೊಸದಾಗಿ ‘ಮೋದಿ ಟ್ಯಾಕ್ಸ್’ ಜಾರಿಗೊಳಿಸಿ ಜನರ ಜೇಬಿಗೆ ಕನ್ನ ಹಾಕಲು ಹೊರಟಿದೆ. ಅಮೆರಿಕದ ಪ್ರಭಾವಕ್ಕೆ ಶರಣಾಗಿ ಈ ತೆರಿಗೆ ವಿಧಿಸಲಾಗುತ್ತಿದೆ,” ಎಂದು ತೀವ್ರ ಆರೋಪ ಮಾಡಿದರು.
ಇದನ್ನೂ ಓದಿ: ಆಹಾರ ಸುರಕ್ಷತೆಗೆ ಕ್ಯೂಆರ್ ಕೋಡ್ ಕಡ್ಡಾಯ, ಮಂಗಳೂರು ದಸರಾ ಸಂಭ್ರಮ: ಯು.ಟಿ. ಖಾದರ್ ಮಹತ್ವದ ಘೋಷಣೆ
ಈ ವಿಷಯದ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಯುಪಿಐ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ಕೇಂದ್ರ ಸರ್ಕಾರದ ಜನವಿರೋಧಿ ನಿರ್ಧಾರದ ವಿರುದ್ಧ ಇಡೀ ದೇಶವೇ ಸಂಘಟಿತವಾಗಿ ಹೋರಾಡಬೇಕಿದೆ. ಇದು ಕೇವಲ ಕಾಂಗ್ರೆಸ್ ಪಕ್ಷದ ಸಮಸ್ಯೆಯಲ್ಲ, ಬದಲಿಗೆ ಇಡೀ ದೇಶದ ಸಾರ್ವಜನಿಕರಿಗೆ ಸಂಬಂಧಿಸಿದ ವಿಚಾರ. ವಿರೋಧ ಪಕ್ಷವಾಗಿ ಸಾಮಾನ್ಯ ಜನರ ಹಿತರಕ್ಷಣೆಗಾಗಿ ಕಾಂಗ್ರೆಸ್ ಬೀದಿಗಿಳಿದು ಹೋರಾಡಲಿದೆ,” ಎಂದು ಕರೆ ನೀಡಿದರು.

