ನೀರಿಲ್ಲದೆ ಒಣಗಿದ ಚಿತ್ರಾವತಿ ನದಿ: ವಿಸರ್ಜನೆಗೆ ನೀರಿಲ್ಲದೆ ಒಣ ನದಿ ಮರಳಿನಲ್ಲೇ ಗಣೇಶನಿಟ್ಟು ಬೀಳ್ಕೊಟ್ಟ ಆಂಧ್ರ ಭಕ್ತರು

ಅನಂತಪುರ : ತೀವ್ರ ಬರಗಾಲ ಹಾಗೂ ಮಳೆಯ ಅಭಾವದ ಭೀಕರ ಚಿತ್ರಣಕ್ಕೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಘಟನೆಯೊಂದು ಜೀವಂತ ನಿದರ್ಶನವಾಗಿ ಮೂಡಿಬಂದಿದೆ. ಪ್ರಸಿದ್ಧ ಚಿತ್ರಾವತಿ ನದಿಯು (Chitravathi River) ನೀರಿಲ್ಲದೆ ಸಂಪೂರ್ಣವಾಗಿ ಒಣಗಿಹೋಗಿದ್ದು, ಪುಟ್ಟುಲೂರು (Puttuluru) ಭಾಗದ ಗ್ರಾಮಸ್ಥರು ವಿಘ್ನನಿವಾರಕ ಗಣೇಶನ ಮೂರ್ತಿಗಳನ್ನು ಜಲಾವೃತಗೊಳಿಸಲು (ವಿಸರ್ಜಿಸಲು) ನೀರಿಲ್ಲದೆ, ಒಣ ನದಿ ಪಾತ್ರದ ಮರಳಿನಲ್ಲೇ ಮೂರ್ತಿಗಳನ್ನಿಟ್ಟು ಕಣ್ಣೀರಿಡುತ್ತಾ ಬೀಳ್ಕೊಟ್ಟಿದ್ದಾರೆ.

ಆಂಧ್ರಪ್ರದೇಶದ ಪುಟ್ಟುಲೂರು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಗಣೇಶ ಚತುರ್ಥಿಯ ಸಂಭ್ರಮದ ನಂತರ ವಿಸರ್ಜನೆಗಾಗಿ ಭಕ್ತರು ಸಾಂಪ್ರದಾಯಿಕವಾಗಿ ಚಿತ್ರಾವತಿ ನದಿಯತ್ತ ಧಾವಿಸಿದ್ದರು. ಆದರೆ, ಮಳೆಯಿಲ್ಲದೆ ನದಿಯಲ್ಲಿ ಒಂದು ಹನಿ ನೀರೂ ಇಲ್ಲದೆ ಸಂಪೂರ್ಣ ಮರಳುಭೂಮಿಯಂತೆ ಮಾರ್ಪಟ್ಟಿರುವುದನ್ನು ಕಂಡು ಭಕ್ತರು ದಿಗ್ಭ್ರಾಂತರಾಗಿದ್ದಾರೆ. ಒಣ ಮರಳಲ್ಲೇ ಮೂರ್ತಿಗಳ ಪ್ರತಿಷ್ಠಾಪನೆ: ನೀರಿಲ್ಲದ ಕಾರಣ, ಭಕ್ತರು ಕಂಗೆಡದೆ ಒಣಗಿ ಹೋಗಿರುವ ನದಿ ಪಾತ್ರದಲ್ಲೇ ಗಣೇಶ ಮೂರ್ತಿಗಳನ್ನು ತಂದು ಸಾಲಾಗಿ ಇಟ್ಟಿದ್ದಾರೆ.

ಇದನ್ನೂ ಓದಿ: ಸೌಜನ್ಯ ಕೊಲೆ ಕೇಸ್: 3 ತಿಂಗಳಲ್ಲಿ ಹೊಸ ತಂಡದಿಂದ ಸ್ವತಂತ್ರ ತನಿಖೆಗೆ ಸುಪ್ರೀಂ ಆದೇಶ

ಇಲ್ಲಿದೆ ನೋಡಿ:

ನೀರಿನ ಬದಲಿಗೆ ನದಿಯ ಒಣ ಮರಳಿನ ಮೇಲೆಯೇ ಕೊನೆಯ ಪೂಜೆ, ಆರತಿ ನೆರವೇರಿಸಿ, ಮುಂದಿನ ವರ್ಷವಾದರೂ ಉತ್ತಮ ಮಳೆ-ಬೆಳೆ ನೀಡಿ ನದಿಯನ್ನು ಸಮೃದ್ಧಗೊಳಿಸು ಎಂದು ಗಣಪತಿಯಲ್ಲಿ ಪ್ರಾರ್ಥಿಸಿದ್ದಾರೆ. ಕರಾವಳಿ ಹಾಗೂ ರಾಯಲಸೀಮಾ ಭಾಗದ ಕೆಲವೆಡೆ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುಡಿಯುವ ನೀರು ಹಾಗೂ ಕೃಷಿಗೆ ನೀರಿಲ್ಲದೆ ಜನ-ಜಾನುವಾರುಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸದಾ ತುಂಬಿ ಹರಿಯುತ್ತಿದ್ದ ಚಿತ್ರಾವತಿ ನದಿಯೂ ಸಂಪೂರ್ಣವಾಗಿ ಬಟಾಬಯಲಾಗಿರುವುದು ಕೇವಲ ಧಾರ್ಮಿಕ ಆಚರಣೆಗೆ ಅಷ್ಟೇ ಅಲ್ಲದೆ, ಪ್ರಕೃತಿ ನೀಡುತ್ತಿರುವ ಬರಗಾಲದ ಎಚ್ಚರಿಕೆಯ ಸಂಕೇತವಾಗಿದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *