ದೆಹಲಿ: ರಾಷ್ಟ್ರ ರಾಜಧಾನಿಯ ಕಟ್ಟುನಿಟ್ಟಿನ ಭದ್ರತೆಗೆ ಹೆಸರುವಾಸಿಯಾದ ರೋಹಿಣಿ ಜೈಲಿನಲ್ಲಿ (Rohini Jail) ವಿಚಾರಣಾಧೀನ ಕೈದಿಯೊಬ್ಬನನ್ನು ಸಹ ಕೈದಿಗಳೇ ಹರಿತವಾದ ಆಯುಧದಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಜೈಲು ಪಾಲಾಗಿದ್ದ ಪ್ರಮೋದ್ ಎಂಬ ಕೈದಿಯೇ ಕೊಲೆಯಾದ ದುರದೃಷ್ಟಕರ. ರೋಹಿಣಿ ಜೈಲಿನ ವಾರ್ಡ್ ನಂಬರ್ 3ರಲ್ಲಿ ಈ ಭೀಕರ ಕೃತ್ಯ ನಡೆದಿದೆ.
ಜೈಲಿನಲ್ಲಿದ್ದ ಭೋಲಾ ಮತ್ತು ಮುಖೇಶ್ ಎಂಬಿಬ್ಬರು ಸಹ ಕೈದಿಗಳು ಪ್ರಮೋದ್ ಮೇಲೆ ಹರಿತವಾದ ಆಯುಧದಿಂದ ಏಕಾಏಕಿ ಭೀಕರವಾಗಿ ದಾಳಿ ನಡೆಸಿದ್ದಾರೆ. ಜೈಲಿನ ಆವರಣದೊಳಗೆ ಪ್ರಮೋದ್ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಈ ತಂಬಾಕು ವ್ಯಾಪಾರದ ಶೇರಿಂಗ್ ಹಾಗೂ ಹಣಕಾಸಿನ ವಿಚಾರದಲ್ಲಿ ಉಂಟಾದ ತೀವ್ರ ವಿವಾದವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ತಂಬಾಕು ವ್ಯಾಪಾರದ ಜೊತೆಗೆ ಕೈದಿಗಳ ನಡುವೆ ಇದ್ದ ವೈಯಕ್ತಿಕ ದ್ವೇಷವೂ ಈ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಆರೋಪಿಗಳು ಹರಿತವಾದ ಆಯುಧದಿಂದ ತೀವ್ರವಾಗಿ ಇರಿದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರಮೋದ್‌ನನ್ನು ಜೈಲು ಸಿಬ್ಬಂದಿ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗಾಯಗಳು ತೀವ್ರವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಪ್ರಮೋದ್ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚಿಸಿದ ಹೈಕೋರ್ಟ್
ಈ ಘಟನೆಯು ರೋಹಿಣಿ ಜೈಲಿನೊಳಗೆ ನಡೆಯುತ್ತಿರುವ ಅಕ್ರಮ ತಂಬಾಕು ದಂಧೆ, ಗ್ಯಾಂಗ್‌ಸ್ಟರ್‌ಗಳ ಚಟುವಟಿಕೆಗಳು ಹಾಗೂ ಕೈದಿಗಳ ಕೈಗೆ ಹರಿತವಾದ ಆಯುಧಗಳು ಹೇಗೆ ಸಿಗುತ್ತಿವೆ ಎಂಬ ಭದ್ರತಾ ಲೋಪಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಘಟನೆ ಹಿನ್ನೆಲೆಯಲ್ಲಿ ಜೈಲು ಉನ್ನತಾಧಿಕಾರಿಗಳು ಪ್ರಕರಣದ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

