ಮಂಗಳೂರು: ಯುದ್ಧದ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಸ್ಥಗಿತಗೊಂಡಿದ್ದ ಮಂಗಳೂರು-ಕುವೈತ್ (Mangaluru-Kuwait) ನೇರ ವಿಮಾನ ಸೇವೆ ಶೀಘ್ರದಲ್ಲೇ ಪುನರಾರಂಭಗೊಳ್ಳುವ ಸಾಧ್ಯತೆಯಿದೆ. ಗಲ್ಫ್ ಕನ್ನಡಿಗರಿಗೆ ಮತ್ತು ಪ್ರವಾಸಿಗರಿಗೆ ಇದು ಮಹತ್ವದ ಸಮಾಧಾನಕರ ಸುದ್ದಿಯಾಗಿದೆ. ಮೂಲಗಳ ಮಾಹಿತಿಯ ಪ್ರಕಾರ, ಏರ್ ಇಂಡಿಯಾ ಎಕ್ಸ್‌ಪ್ರೆಸ್ (Air India Express) ತನ್ನ ‘ವಿಂಟರ್ ಶೆಡ್ಯೂಲ್’ನ (Winter Schedule) ಭಾಗವಾಗಿ ಅಕ್ಟೋಬರ್ ಕೊನೆಯ ವಾರದಲ್ಲಿ ಮಂಗಳೂರು ಮತ್ತು ಕುವೈತ್ ನಡುವೆ ನೇರ ವಿಮಾನ ಸೇವೆಯನ್ನು ಮರುಪ್ರಾರಂಭಿಸಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ.
ಲಭ್ಯವಿರುವ ವೇಳಾಪಟ್ಟಿಯ ಪ್ರಕಾರ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ಅಕ್ಟೋಬರ್ 27 ರಿಂದ ಮಂಗಳೂರು ಮತ್ತು ಕುವೈತ್ ನಡುವೆ ವಾರಕ್ಕೆ ಮೂರು ದಿನಗಳ ಕಾಲ (ಮಂಗಳವಾರ, ಶುಕ್ರವಾರ ಮತ್ತು ಮತ್ತೊಂದು ನಿಗದಿತ ದಿನ) ನೇರ ವಿಮಾನಗಳನ್ನು ಕಾರ್ಯಾಚರಣೆ ಮಾಡಲಿದೆ. ಯುದ್ಧ ಆರಂಭವಾಗುವ ಮುನ್ನವೂ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು ಹಾಗೂ ಕುವೈತ್ ನಡುವೆ ವಾರಕ್ಕೆ ಮೂರು ವಿಮಾನಗಳನ್ನು ನಡೆಸುತ್ತಿತ್ತು.
ಇದನ್ನೂ ಓದಿ: ಆಹಾರ ಸುರಕ್ಷತೆಗೆ ಕ್ಯೂಆರ್ ಕೋಡ್ ಕಡ್ಡಾಯ, ಮಂಗಳೂರು ದಸರಾ ಸಂಭ್ರಮ: ಯು.ಟಿ. ಖಾದರ್ ಮಹತ್ವದ ಘೋಷಣೆ
ಯುದ್ಧದ ಪ್ರಭಾವ: ಇರಾನ್-ಇಸ್ರೇಲ್ ಮತ್ತು ಯುಎಸ್ ನಡುವಿನ ತೀವ್ರ ಸಂಘರ್ಷದ ಪರಿಣಾಮವಾಗಿ ಗಲ್ಫ್ ರಾಷ್ಟ್ರಗಳೊಂದಿಗಿನ ವಾಯು ಸಂಪರ್ಕವು ಗಣನೀಯವಾಗಿ ಸ್ಥಗಿತಗೊಂಡಿತ್ತು. ಕ್ಷಿಪಣಿ ದಾಳಿಯಿಂದಾಗಿ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾನಿಯಾಗಿತ್ತು. ತದನಂತರ ವಿಮಾನ ನಿಲ್ದಾಣವನ್ನು ದುರಸ್ತಿ ಮಾಡಲಾಯಿತಾದರೂ, ಇತ್ತೀಚಿನವರೆಗೆ ಕೇವಲ ಜಜೀರಾ ಏರ್‌ವೇಸ್ (Jazeera Airways) ಮತ್ತು ಕುವೈತ್ ಏರ್‌ವೇಸ್ (Kuwait Airways) ಮಾತ್ರ ಅಲ್ಲಿಂದ ವಿಮಾನ ಕಾರ್ಯಾಚರಣೆ ನಡೆಸುತ್ತಿದ್ದವು.
ಯುದ್ಧದ ತೀವ್ರತೆ ಕಡಿಮೆಯಾದಂತೆ ಬಹುತೇಕ ಗಲ್ಫ್ ದೇಶಗಳಿಗೆ ವಿಮಾನ ಸೇವೆ ಪುನರಾರಂಭಗೊಂಡಿತ್ತಾದರೂ, ಕುವೈತ್ ಸೇವೆ ತಡವಾಗಿತ್ತು. ಇದೀಗ ವಿದೇಶಿ ವಿಮಾನಯಾನ ಸಂಸ್ಥೆಗಳು ಹಂತ ಹಂತವಾಗಿ ಕುವೈತ್‌ಗೆ ತಮ್ಮ ಸೇವೆಯನ್ನು ಮರುಪ್ರಾರಂಭಿಸುತ್ತಿದ್ದು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಕೂಡ ಸೇವೆ ಆರಂಭಿಸುತ್ತಿದೆ.

