Breaking News

ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟದ ಬಿಸಿ: ಸರ್ಕಾರಿ ಬೊಕ್ಕಸ ಖಾಲಿ, 8.24 ಲಕ್ಷ ಕೋಟಿಗೆ ಏರಿಕೆಯಾಯ್ತು ಒಟ್ಟು ಸಾಲ; ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ತೀವ್ರ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಕುರಿತು ಹಣಕಾಸು ಇಲಾಖೆ ಹೊರಹಾಕಿದೆ ಎನ್ನಲಾದ ವರದಿ ಇದೀಗ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಭರವಸೆಗಳ ಅನುಷ್ಠಾನ ಹಾಗೂ ಹಣಕಾಸು ನಿರ್ವಹಣೆಯ ಲೋಪದಿಂದಾಗಿ ರಾಜ್ಯವು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರಿ ಬೊಕ್ಕಸ ಸಂಪೂರ್ಣ ಖಾಲಿಯಾಗಿದೆ ಎಂದು ವಿಪಕ್ಷಗಳು ಕಟುವಾಗಿ ವೀಕ್ಷಣೆ ಮಾಡಿವೆ. ಹಣಕಾಸು ಇಲಾಖೆಯ ಮುನ್ನೆಚ್ಚರಿಕೆಯ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯನ್ನು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಪೋಸ್ಟರ್​ ಮಾಡಿ ಎಕ್ಸ್​​​ನಲ್ಲಿ ಹಾಕಿಕೊಂಡಿದೆ.

ಹಣಕಾಸು ಇಲಾಖೆಯ ವರದಿಯ ಆಧಾರದ ಮೇಲೆ ಪ್ರಮುಖ ಆರ್ಥಿಕ ಬಿಕ್ಕಟ್ಟಿನ ಅಂಶಗಳು ಹೊರಬಿದ್ದಿವೆ. ರಾಜ್ಯದ ಒಟ್ಟು ಸಾಲದ ಹೊರೆ ಬರೋಬ್ಬರಿ 8.24 ಲಕ್ಷ ಕೋಟಿ ತಲುಪಿದೆ. ಪ್ರಸಕ್ತ ಹಣಕಾಸು ವರ್ಷದಲ್ಲೇ ಸರ್ಕಾರ ಹೆಚ್ಚುವರಿಯಾಗಿ ₹1.32 ಲಕ್ಷ ಕೋಟಿ ಹೊಸ ಸಾಲ ಮಾಡಲು ಮುಂದಾಗಿದೆ. ರಾಜ್ಯದಲ್ಲಿ 22,957 ಕೋಟಿ ರೂ. ಕಂದಾಯ ಕೊರತೆ ಎದುರಾಗಿದ್ದು, ಹೊಸ ಯೋಜನೆಗಳಿಗೆ ಹಣವೇ ಇಲ್ಲದಂತಾಗಿದೆ.

ಸರ್ಕಾರಿ ಗುತ್ತಿಗೆದಾರರು, ಸಾರಿಗೆ ಸಂಸ್ಥೆಗಳು ಹಾಗೂ ವಿದ್ಯುತ್ ಸರಬರಾಜು ಕಂಪನಿಗಳಿಗೆ (ESCOMs) ಸರ್ಕಾರದಿಂದ ಬರೋಬ್ಬರಿ ₹36,000 ಕೋಟಿ ಬಾಕಿ ಪಾವತಿಸುವುದು ಬಾಕಿಯಿದೆ. ಅನುದಾನದ ಅಭಾವದಿಂದಾಗಿ ರಾಜ್ಯಾದ್ಯಂತ ಸುಮಾರು ₹2 ಲಕ್ಷ ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತುಹೋಗಿವೆ.

ಖಾಲಿ ಬೊಕ್ಕಸವನ್ನು ಇಟ್ಟುಕೊಂಡು ಚುನಾವಣೆಗೂ ಮುನ್ನ ಈಡೇರಿಸಲಾಗದ ಭರವಸೆಗಳನ್ನು ನೀಡಿ ರಾಜ್ಯವನ್ನು ದಿವಾಳಿತನದ ಅಂಚಿಗೆ ತಳ್ಳಲಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.

ಇದನ್ನೂ ಓದಿ: ಕೆಪಿಎಸ್‌ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಐಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚಿಸಿದ ಹೈಕೋರ್ಟ್

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ವಿಪಕ್ಷ ನಾಯಕರು, “ಜವಾಬ್ದಾರಿಯುತ ಆಡಳಿತ ನೀಡುವ ಬದಲು, ಲೂಟಿ ಹೊಡೆಯುವ ತರಹದ ರಾಜಕಾರಣ ಮಾಡಿ ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳಲಾಗಿದೆ. ಬೊಕ್ಕಸದಲ್ಲಿ ಹಣವಿಲ್ಲದಿರುವಾಗ ಚುನಾವಣೆ ಪೂರ್ವ ಉಚಿತ ಭರವಸೆಗಳನ್ನು ನೀಡುವುದು ಅಪಾಯಕಾರಿ ಎಂದು ಹಣಕಾಸು ಇಲಾಖೆಯೇ ಎಚ್ಚರಿಸುವ ಮೂಲಕ ಸರ್ಕಾರದ ಅಸಲಿ ಮುಖವಾಡ ಕಳಚಿಬಿದ್ದಿದೆ” ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಹಣಕಾಸು ಇಲಾಖೆಯ ಈ ಸಾಲದ ಅಂಕಿ-ಅಂಶಗಳು ಹಾಗೂ ವಿಪಕ್ಷಗಳ ಆರೋಪಗಳು ಮುಂಬರುವ ದಿನಗಳಲ್ಲಿ ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಕಾವು ಹೆಚ್ಚಿಸುವುದು ಖಚಿತವಾಗಿದೆ ಎಂದು ಬಿಜೆಪಿ ಎಕ್ಸ್​​ ಪೋಸ್ಟರ್​​ ಹಾಕಿಕೊಂಡು ಟೀಕಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *