Breaking News

ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತದ ಡಬಲ್ ಧಮಾಕಾ: ಇರಾನ್ ವಿರುದ್ಧ ಗಂಡು-ಹೆಣ್ಣು ಎರಡೂ ವಿಭಾಗದಲ್ಲೂ ಬಂಗಾರದ ಬೇಟೆ

ಏಷ್ಯನ್ ಗೇಮ್ಸ್ ಕಬಡ್ಡಿ ಅಂಕಣದಲ್ಲಿ ಭಾರತ ತನ್ನ ಸಾರ್ವಕಾಲಿಕ ಮೇಲುಗೈಯನ್ನು ಎತ್ತಿಹಿಡಿದಿದೆ. ಶನಿವಾರ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯಗಳಲ್ಲಿ ಬಲಶಾಲಿ ಇರಾನ್ ತಂಡವನ್ನು ಮಣಿಸಿದ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಪ್ರತ್ಯೇಕವಾಗಿ ಚಿನ್ನದ ಪದಕಕ್ಕೆ ಮುತ್ತಿಕ್ಕಿ ಐತಿಹಾಸಿಕ ಸಾಧನೆ ಮಾಡಿವೆ. ಭಾರತದ ಪುರುಷರ ತಂಡ 40-34 ಅಂತರದಲ್ಲಿ ಇರಾನ್ ವಿರುದ್ಧ ರೋಚಕ ಜಯ ಸಾಧಿಸಿದರೆ, ಅದಕ್ಕೂ ಮುನ್ನ ನಡೆದ ಮಹಿಳೆಯರ ಫೈನಲ್‌ನಲ್ಲಿ ಭಾರತೀಯ ವನಿತೆಯರ ಪಡೆ 37-34 ಅಂಕಗಳಿಂದ ಇರಾನ್ ತಂಡವನ್ನು ಪತನಗೊಳಿಸಿ ಸ್ವರ್ಣ ಪದಕ ಮುಡಿಗೇರಿಸಿಕೊಂಡಿತು.

ಪುರುಷರ ಫೈನಲ್

ಪುರುಷರ ವಿಭಾಗದ ಚಾಂಪಿಯನ್‌ಶಿಪ್ ಪಂದ್ಯವು ಅಭಿಮಾನಿಗಳಿಗೆ ಉಗುರು ಕಚ್ಚುವಂತಹ ರೋಮಾಂಚನ ನೀಡಿತು. ಪಂದ್ಯದ ಪ್ರಮುಖ ಘಟ್ಟದಲ್ಲಿ ಎರಡೂ ತಂಡಗಳು 20-20 ಸಮಬಲ ಸಾಧಿಸಿ ತೀವ್ರ ಪೈಪೋಟಿ ಒಡ್ಡಿದ್ದವು. ಆದರೆ, ಅಂತಿಮ ಕ್ಷಣಗಳಲ್ಲಿ ಅದ್ಭುತ ರೈಡಿಂಗ್ ಹಾಗೂ ಟ್ಯಾಕಲ್ ಮೂಲಕ ಮುನ್ನಡೆ ಸಾಧಿಸಿದ ಭಾರತೀಯ ಆಟಗಾರರು, ಇರಾನ್‌ಗೆ ತಿರುಗೇಟು ನೀಡಿ 40-34 ಅಂಕಗಳಿಂದ ಪಂದ್ಯವನ್ನು ವಶಪಡಿಸಿಕೊಂಡರು. ಇದು ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತೀಯ ಪುರುಷರ ತಂಡಕ್ಕೆ ಒಟ್ಟಾರೆ 9ನೇ ಚಿನ್ನದ ಪದಕವಾಗಿದೆ.

2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಇರಾನ್ ಕೈಯಲ್ಲಿ ಸೋತು ಭಾರತ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು (ಅದಕ್ಕೂ ಮುನ್ನ ಸತತ 7 ಚಿನ್ನ ಗೆದ್ದಿತ್ತು). ಆದರೆ, 2023ರ ಹಾಂಗ್‌ಝೌ ಕ್ರೀಡಾಕೂಟದಿಂದ ಆರಂಭಿಸಿ ಭಾರತವು ಕಬಡ್ಡಿಯಲ್ಲಿ ತನ್ನ ಅಗ್ರಸ್ಥಾನದ ಸಾಮ್ರಾಜ್ಯವನ್ನು ಮರಳಿ ಸ್ಥಾಪಿಸಿದೆ.

ಇದನ್ನೂ ಓದಿ: ಏಷ್ಯನ್ ಗೇಮ್ಸ್ ಪ್ರಿಪರೇಶನ್‌ನಲ್ಲಿ ಭಾರತಕ್ಕೆ ಬಿಗ್ ಶಾಕ್: ಜಪಾನ್ ವಿರುದ್ಧ ಜಸ್ಟ್ ಇನ್ ಡ್ರಾಮಾ; 2 ರನ್‌ಗಳ ರೋಚಕ ಜಯ ಸಾಧಿಸಿದ ಇಂಡಿಯಾ

ಇರಾನ್ ಹೋರಾಟ ಮೆಟ್ಟಿನಿಂತ ಭಾರತೀಯ ವನಿತೆಯರು!

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಆರಂಭದಿಂದಲೂ ಕಂಟ್ರೋಲ್‌ನಲ್ಲಿದ್ದ ಭಾರತೀಯ ತಂಡ ಪ್ರಥಮಾರ್ಧದ ವೇಳೆಗೆ 22-16 ಅಂತರದ ಬಲವಾದ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ಕಂಬ್ಯಾಕ್ ಮಾಡಿದ ಇರಾನ್ ತಂಡ 18-15 ಅಂಕಗಳ ಅಂತರದಲ್ಲಿ ಕಠಿಣ ಸವಾಲೆಸೆಯಿತಾದರೂ, ಆರಂಭಿಕ ಮುನ್ನಡೆಯ ಆಸರೆಯಲ್ಲಿ ಭಾರತದ ಮಹಿಳೆಯರು 37-34 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. 2018ರ ಜಕಾರ್ತಾ ಕೂಟದಲ್ಲಿ ಇರಾನ್ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದನ್ನು ಹೊರತುಪಡಿಸಿದರೆ, ಏಷ್ಯನ್ ಗೇಮ್ಸ್ ಇತಿಹಾಸದ ಪ್ರತಿಯೊಂದು ಆವೃತ್ತಿಯಲ್ಲೂ ಭಾರತೀಯ ಮಹಿಳಾ ಕಬಡ್ಡಿ ತಂಡವೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿರುವುದು ವಿಶೇಷ.

ಮತ್ತಷ್ಟ ಓದಲು ಇಲ್ಲಿ ಕ್ಲಿಕ್‌ ಮಾಡಿ