ಹೈದರಾಬಾದ್: ನೆರೆಯ ತೆಲಂಗಾಣದ ಹೈದರಾಬಾದ್‌ನ ಎಸ್‌ಆರ್ ನಗರದಲ್ಲಿರುವ ‘ಗೋಕುಲ್ ಪ್ರೈಡ್ OYO’ ಹೋಟೆಲ್ ಕೊಠಡಿಯಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.
ಆರಂಭಿಕ ಮಾಹಿತಿಯ ಪ್ರಕಾರ, ಸಿ. ಗಣೇಶ್ ಎಂಬ ಯುವಕನ ಹೆಸರಿನಲ್ಲಿ ಯುವತಿ ಹಾಗೂ ಯುವಕ ಹೋಟೆಲ್‌ನ ಕೊಠಡಿ ಸಂಖ್ಯೆ 103ರಲ್ಲಿ ತಂಗಿದ್ದರು. ಮಂಗಳವಾರ ಬೆಳಿಗ್ಗೆ ಕೊಠಡಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಾರಿ ಆತಂಕ ಮೂಡಿಸಿದೆ.
ಮೃತರ ಬಳಿಯಿದ್ದ ಆಧಾರ್ ಕಾರ್ಡ್‌ನಲ್ಲಿ ಹೆಸರು ‘ದುರ್ಗಾ’ ಎಂದು ನಮೂದಾಗಿದೆ. ಆದರೆ, ಹಿಂದೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಾಗ ಆಕೆ ‘ಶಿರೀಷ’ ಎಂಬ ಹೆಸರಿನಲ್ಲಿ ನೋಂದಾಯಿಸಿಕೊಂಡಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಹಿಂದೆ ಗಂಡ ನಡೆಸಿದ ಹಲ್ಲೆಯಿಂದ ಗಾಯಗೊಂಡು ಆಕೆ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಮಾಹಿತಿಯೂ ತನಿಖೆ ವೇಳೆ ಲಭ್ಯವಾಗಿದೆ.
ಇದನ್ನೂ ಓದಿ: ಜೈಲಿಂದ ಬಂದರೂ ಬುದ್ಧಿ ಕಲಿಯದ ಕಳ್ಳನಿಗೆ ಸಾರ್ವಜನಿಕರ ಕ್ಲಾಸ್!: ಜಿಪಿಎಸ್ ಟ್ರ್ಯಾಕರ್ ಧರಿಸಿದ್ದವನಿಗೆ ಬಿತ್ತು ಧರ್ಮದೇಟು
ಘಟನಾ ಸ್ಥಳಕ್ಕೆ ದೌಡಾಯಿಸಿರುವ ಎಸ್‌ಆರ್ ನಗರ ಪೊಲೀಸರು ಹೋಟೆಲ್ ರಿಸೆಪ್ಶನ್ ರಜಿಸ್ಟರ್ ಹಾಗೂ ತಂಗಿದ್ದ ಕೊಠಡಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ್ದಾರೆ. ಹೋಟೆಲ್‌ನ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಯುವತಿಯೊಂದಿಗೆ ತಂಗಿದ್ದ ಗಣೇಶ್ ಎಂಬ ಯುವಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಕೋನದಲ್ಲಿ ತನಿಖೆ ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

