Breaking News

ಜಮ್ಮು-ಕಾಶ್ಮೀರದಲ್ಲಿ ಸಿಐಎಸ್‌ಎಫ್ ಕ್ಯಾಂಪ್‌ನಲ್ಲಿ ಯೋಧನಿಂದಲೇ ಫೈರಿಂಗ್

ಕಥುವಾ: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯ ಬಸೋಲಿಯಲ್ಲಿರುವ ಸಿಐಎಸ್‌ಎಫ್ (CISF) ಕ್ಯಾಂಪ್‌ನಲ್ಲಿ ಯೋಧನೊಬ್ಬ ತನ್ನದೇ ಸಹೋದ್ಯೋಗಿಗಳ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ಭೀಕರ ಫೈರಿಂಗ್‌ನಲ್ಲಿ ಅಸಿಸ್ಟೆಂಟ್ ಕಮಾಂಡೆಂಟ್ ದರ್ಜೆಯ ಅಧಿಕಾರಿ ಸೇರಿ ಒಟ್ಟು ನಾಲ್ವರು ಸಿಐಎಸ್‌ಎಫ್ ಯೋಧರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಬಸೋಲಿ ಸಿಐಎಸ್‌ಎಫ್ ಕ್ಯಾಂಪ್‌ನಲ್ಲಿ ಕರ್ತವ್ಯದ ಅವಧಿ ಬದಲಾವಣೆ (Duty Change) ಮಾಡುವ ಸಂದರ್ಭದಲ್ಲಿ ಯೋಧರ ನಡುವೆ ಸಣ್ಣ ಮಟ್ಟದ ಮಾತಿನ ಚಕಮಕಿ ಹಾಗೂ ವಾಗ್ವಾದ ಶುರುವಾಗಿದೆ. ಈ ವೇಳೆ ಆಕ್ರೋಶಗೊಂಡ 2009ರ ಬ್ಯಾಚ್‌ನ ಹೆಡ್ ಕಾನ್‌‌ಸ್ಟೇಬಲ್ ಅಬದೇಶ್ ಕುಮಾರ್ ಎಂಬಾತ ತನ್ನ ಬಳಿಯಿದ್ದ ಸೇವಾ ಬಂದೂಕಿನಿಂದ (Service Weapon) ಸಹೋದ್ಯೋಗಿಗಳ ಮೇಲೆ ಏಕಾಏಕಿ ಗುಂಡಿನ ಮಳೆ ಕರೆದಿದ್ದಾನೆ.

ಗುಂಡಿನ ಸದ್ದಿನಿಂದ ಕ್ಯಾಂಪ್‌ನಲ್ಲಿ ಕ್ಷಣಕಾಲ ತೀವ್ರ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಗಂಭೀರವಾಗಿ ಗಾಯಗೊಂಡ ಅಸಿಸ್ಟೆಂಟ್ ಕಮಾಂಡೆಂಟ್ ಸೇರಿದಂತೆ ನಾಲ್ವರು ಯೋಧರು ತೀವ್ರ ರಕ್ತಸ್ರಾವದಿಂದಾಗಿ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಇವಳು ಯಾರು ಗೊತ್ತಾಯ್ತಾ? ಇವಳು ನನ್ನ ಹೆಂಡತಿ; ಮಾಫಿ ಸಾಕ್ಷಿ ಪ್ರದೋಶ್‌ ಬಿಚ್ಚಿಟ್ಟ ಸತ್ಯ

ಕೃತ್ಯ ಎಸಗಿದ ಬಳಿಕ ಸ್ಥಳದಲ್ಲೇ ಇದ್ದ ಹೆಡ್ ಕಾನ್‌ಸ್ಟೇಬಲ್ ಅಬದೇಶ್ ಕುಮಾರ್‌ನನ್ನು ಭದ್ರತಾ ಸಿಬ್ಬಂದಿ ತಕ್ಷಣವೇ ವಶಕ್ಕೆ ಪಡೆದು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಫೈರಿಂಗ್ ಮಾಡಲು ನಿಖರ ಕಾರಣವೇನು ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಿಐಎಸ್‌ಎಫ್‌ನ ಹಿರಿಯ ಅಧಿಕಾರಿಗಳು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ