ಮಂಗಳೂರು: ಮಂಗಳೂರಿನ ಎಂಆರ್ಪಿಎಲ್ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಕಚ್ಚಾ ತೈಲ ಶುದ್ಧೀಕರಣ ಘಟಕದಲ್ಲಿ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಆಘಾತಕಾರಿ ಹಾಗೂ ವಿಷಾದಕರ ಸಂಗತಿ ಹೊರಬಿದ್ದಿದೆ. ಸ್ಫೋಟದ ವೇಳೆ ನಾಪತ್ತೆಯಾಗಿದ್ದ ಕಾರ್ಮಿಕ ಮನೀಶ್ ಕರ್ಕರ (30) ಅವರು ದಾರುಣವಾಗಿ ಮೃತಪಟ್ಟಿದ್ದಾರೆ. ಸ್ಫೋಟ ಸಂಭವಿಸಿದ ಸಿಎಚ್ಟಿಯು (CHTU) ಘಟಕದ ಸ್ಥಳದಲ್ಲಿ ತೀವ್ರ ಹುಡುಕಾಟ ನಡೆಸಿದಾಗ, ಮನೀಶ್ ಕರ್ಕರ ಅವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಘೋರ ಅವಘಡದಲ್ಲಿ ಈವರೆಗೆ ಓರ್ವ ಸಾವನ್ನಪ್ಪಿದ್ದು, ಒಟ್ಟು 9 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ನಗರದ ಆಸ್ಪತ್ರೆಗಳಿಗೆ ದಾಖಲಿಸಿ ತುರ್ತು ನಿಗಾ ಘಟಕಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಸ್ತುತ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದಿದ್ದು, ಉನ್ನತಾಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ದುರಂತದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

