ದುಬೈನಿಂದ ಇಸ್ರೇಲ್‌ನ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ (flydubai) ವಿಮಾನದಲ್ಲಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ (Smit Machchhar) ಅವರ ಮೇಲೆ ಕೊಲೆಗಡುಕ ದಾಳಿ ನಡೆಸಿದ್ದ ಓಮನ್ ಮೂಲದ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ (Hamam Al-Hammami), ಸೌದಿ ಅರೇಬಿಯಾ ಹಾಗೂ ಯುಎಇ ತನಿಖಾಧಿಕಾರಿಗಳ ತೀವ್ರ ವಿಚಾರಣೆ ವೇಳೆ ಆಘಾತಕಾರಿ ಸತ್ಯಗಳನ್ನು ಬಾಯಿಬಿಟ್ಟಿದ್ದಾನೆ. “ನನಗೆ ಸಾವಿನ ಭಯವಿರಲಿಲ್ಲ; ಇಸ್ರೇಲ್ ನೆಲದ ಮೇಲೆಯೇ ಈ ವಿಮಾನವನ್ನು ಅಪ್ಪಳಿಸಿ ಭೀಕರ ದುರಂತ ಸೃಷ್ಟಿಸುವುದು ನನ್ನ ಯೋಜನೆಯಾಗಿತ್ತು” ಎಂದು ಈತ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿರುವುದಾಗಿ ‘ದಿ ವಾಲ್ ಸ್ಟ್ರೀಟ್ ಜರ್ನಲ್’ (WSJ) ವರದಿ ಮಾಡಿದೆ.
ಆ ಕರಾಳ ಕ್ಷಣ: ಪ್ರಾರ್ಥನೆಯ ನೆಪ ಹೇಳಿ ಕೊಡಲಿಯಿಂದ ತಲೆಗೆ ಪೆಟ್ಟು!
ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಸಾಹಸಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ಶನಿವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ದೂರವಾಣಿ ಕರೆ ಮೂಲಕ ಸಂಭಾಷಣೆ ನಡೆಸಿದ್ದು, ಗಗನದಲ್ಲಿ ನಡೆದ ಆ ಕರಾಳ ಕ್ಷಣವನ್ನು ಹಂಚಿಕೊಂಡಿದ್ದಾರೆ. ವಿಮಾನ ಹಾರಾಟ ನಡೆಸುತ್ತಿದ್ದಾಗ ಸಹ-ಪೈಲಟ್ ಹಮ್ಮಾಮಿ ಪ್ರಾರ್ಥನೆ ಮಾಡಲು ಅನುಮತಿ ಕೇಳಿದನು. ಸ್ಮಿತ್ ಸಮ್ಮತಿಸುತ್ತಿದ್ದಂತೆ, ಕಾಕ್‌ಪಿಟ್‌ನಲ್ಲಿದ್ದ ತುರ್ತು ಕೊಡலಿಯನ್ನು (Cockpit crash axe) ತೆಗೆದುಕೊಂಡು ಸ್ಮಿತ್ ಅವರ ತಲೆಯ ಹಿಂಭಾಗಕ್ಕೆ ಭೀಕರವಾಗಿ ಹೊಡೆದಿದ್ದಾನೆ.
“ಮೊದಲು ವಿಮಾನಕ್ಕೇ ಏನೋ ತಾಂತ್ರಿಕ ತೊಂದರೆಯಾಗಿ ಕುಸಿಯುತ್ತಿದೆ ಎಂದು ಭಾವಿಸಿದೆ. ಆದರೆ ಸತತ ಹೊಡೆತಗಳು ಬೀಳುತ್ತಿದ್ದಾಗ ಪಕ್ಕದಲ್ಲಿದ್ದವನೇ ದಾಳಿ ಮಾಡುತ್ತಿದ್ದಾನೆ ಎಂಬುದು ಅರಿವಾಯಿತು. ತಲೆಯಿಂದ ರಕ್ತ ಸುರಿಯುತ್ತಿದ್ದರೂ ಜೀವದ ಹಂಗು ತೊರೆದು ಕಾಕ್‌ಪಿಟ್ ಬಾಗಿಲನ್ನು ಹೊರಗೆ ಎಳೆದು ಅನ್‌ಲಾಕ್ ಮಾಡಿದೆ” ಎಂದು ಸ್ಮಿತ್ ತಿಳಿಸಿದ್ದಾರೆ. ಬಾಗಿಲು ತೆರೆಯುತ್ತಿದ್ದಂತೆ ಪ್ರಯಾಣಿಕರು ಒಳನುಗ್ಗಿ ದಾಳಿಕೋರನನ್ನು ಮಟ್ಟಹಾಕಿದ್ದಾರೆ.
ಓಮನ್‌ನಲ್ಲಿ ಬ್ಯಾನ್ ಆಗಿದ್ದ ಉಗ್ರ ಸಿದ್ಧಾಂತದ ಪೈಲಟ್ ಫ್ಲೈದುಬೈಗೆ ಸೇರಿದ್ದು ಹೇಗೆ?:
ಹಮ್ಮಾಮಿ ಓಮನ್ ಪ್ರಜೆಯಾಗಿದ್ದರೂ, ಆತನ ತಾಯಿ ಸಿರಿಯಾ ಮೂಲದವರಾಗಿದ್ದು, ಆತ ತನ್ನ ಹೆಚ್ಚಿನ ಸಮಯವನ್ನು ಸಿರಿಯಾದಲ್ಲೇ ಕಳೆದು ಅಲ್ಲಿಯೇ ತೀವ್ರಗಾಮಿ ಉಗ್ರ ಸಿದ್ಧಾಂತಕ್ಕೆ ಮಾರುಹೋಗಿದ್ದ. 2024 ರಲ್ಲೇ ‘ಓಮನ್ ಏರ್’ ಸಂಸ್ಥೆಯಲ್ಲಿ ಸಹ-ಪೈಲಟ್ ಆಗಿದ್ದಾಗ ಈತನ ಬಳಿ ಉಗ್ರಗಾಮಿ ಸಾಹಿತ್ಯ ಮತ್ತು ಸಾಮಗ್ರಿಗಳು ಪತ್ತೆಯಾಗಿದ್ದವು. ಹೀಗಾಗಿ ಆತನನ್ನು ಹಾರಾಟ ನಡೆಸದಂತೆ ತವರು ನೆಲದಲ್ಲೇ ನಿಷೇಧಿಸಲಾಗಿತ್ತು. ಓಮನ್‌ನಲ್ಲಿ ಹಾರಾಟ ನಿರ್ಬಂಧವಿದ್ದರೂ ಆತ ಫ್ಲೈದುಬೈ ಸಂಸ್ಥೆಗೆ ಹೇಗೆ ನೇಮಕಗೊಂಡ ಮತ್ತು ಇಸ್ರೇಲ್‌ನಂತಹ ಅತ್ಯಂತ ಸೂಕ್ಷ್ಮ ಮಾರ್ಗದ ವಿಮಾನಕ್ಕೆ ಆತನನ್ನು ಹೇಗೆ ನಿಯೋಜಿಸಲಾಯಿತು ಎಂಬ ಬಗ್ಗೆ ಇಸ್ರೇಲ್‌ನ ಮೊಸಾದ್ (Mossad) ಮತ್ತು ಯುಎಇ ಭದ್ರತಾ ಸಂಸ್ಥೆಗಳು ತನಿಖೆ ಚುರುಕುಗೊಳಿಸಿವೆ.
ಯುಎಇಯ ‘ಎಮಿರೇಟ್ಸ್ ನ್ಯೂಸ್ ಏಜೆನ್ಸಿ’ ಪ್ರಕಾರ, ಇದೊಂದು ವ್ಯವಸ್ಥಿತ ಭಯೋತ್ಪಾದಕ ಕೃತ್ಯವಾಗಿದ್ದು, ವಿಮಾನವನ್ನು ಜನನಿಬಿಡ ನಗರ ಪ್ರದೇಶಕ್ಕೆ ಅಪ್ಪಳಿಸುವ ಸಂಚು ಇದಾಗಿತ್ತು ಎಂದು ದೃಢಪಡಿಸಿದೆ.
ಇದನ್ನೂ ಓದಿ: ದುಬೈನ ಆಸ್ಪತ್ರೆಗೆ ತೆರಳಿ ಭಾರತದ ವೀರ ಪೈಲಟ್ ಸ್ಮಿತ್ ಮಚ್ಚಾರ್ ಅವರನ್ನು ತಬ್ಬಿಕೊಂಡು ಶ್ಲಾಘಿಸಿದ ದುಬೈ ಯುವರಾಜ
ಇಸ್ರೇಲ್ ಸ್ವಾತಂತ್ರ್ಯ ದಿನಾಚರಣೆಗೆ ‘ಮುಖ್ಯ ಅತಿಥಿ’ಯಾಗಿ ಕ್ಯಾಪ್ಟನ್ ಸ್ಮಿತ್‌ಗೆ ಆಹ್ವಾನ!
174 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೆ, ಇಸ್ರೇಲ್‌ನ ಮುಂಬರುವ ಸ್ವಾತಂತ್ರ್ಯ ದಿನಾಚರಣೆಗೆ ಮುಖ್ಯ ಗೌರವ ಅತಿಥಿಯಾಗಿ (Chief Guest) ದೇಶಕ್ಕೆ ಭೇಟಿ ನೀಡುವಂತೆ ಅಧಿಕೃತ ಆಹ್ವಾನ ನೀಡಿದ್ದಾರೆ. ಈ ಭೀಕರ ಘಟನೆಯ ಬೆನ್ನಲ್ಲೇ, ವಿಮಾನದ ಕಾಕ್‌ಪಿಟ್‌ನಲ್ಲಿಡುವ ತುರ್ತು ‘ಕ್ರ್ಯಾಶ್ ಆಕ್ಸ್’ (Crash Axe) ಬಳಕೆಯ ಭದ್ರತಾ ನಿಯಮಗಳನ್ನು ಮರುಪರಿಶೀಲಿಸಲು ಜಾಗತಿಕ ವಾಯುಯಾನ ರಂಗ ಮುಂದಾಗಿದೆ.
ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

