ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ (Mysuru Dasara 2026) ಈ ಬಾರಿ ಭಾರತೀಯ ಸಶಸ್ತ್ರ ಪಡೆಗಳ ಜಂಟಿ ಭಾಗವಹಿಸುವಿಕೆಯೊಂದಿಗೆ ಮತ್ತಷ್ಟು ರಂಗು ಬರಲಿದೆ. ಭಾರತೀಯ ವಾಯುಪಡೆಯ ಪ್ರಸಿದ್ಧ ‘ಸೂರ್ಯ ಕಿರಣ್’ ಅಕ್ರಾಬ್ಯಾಟಿಕ್ ತಂಡದ (Surya Kiran Aerobatic Team – SKAT) ಸಾಹಸಮಯ ವೈಮಾನಿಕ ಪ್ರದರ್ಶನ ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಲಿದ್ದು, ಅದ್ಧೂರಿ ಪ್ರದರ್ಶನಕ್ಕೆ ಕೇಂದ್ರ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಅಕ್ಟೋಬರ್ 18 ರಿಂದ 20 ರವರೆಗೆ ಮೂರು ದಿನಗಳ ಕಾಲ ಸೂರ್ಯ ಕಿರಣ್ ವಿಮಾನಗಳು ಸಾಂಸ್ಕೃತಿಕ ನಗರಿ ಮೈಸೂರಿನ ಗಗನದಲ್ಲಿ ಕಣ್ಣುಕೋರೈಸುವ ಶೌರ್ಯ ಹಾಗೂ ಕೌಶಲದ ಕಸರತ್ತುಗಳನ್ನು ಪ್ರದರ್ಶಿಸಲಿವೆ.
ಮೈಸೂರು ದಸರಾದಲ್ಲಿ ಸಶಸ್ತ್ರ ಪಡೆಗಳ ಪ್ರದರ್ಶನ ಸಂಘಟಿಸುವ ಕುರಿತು ಕರ್ನಾಟಕ ಸರ್ಕಾರವು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಲ್ಲಿ ಮನವಿ ಮಾಡಿತ್ತು. ಈ ಮನವಿಗೆ ತಕ್ಷಣವೇ ಸ್ಪಂದಿಸಿ, ಯೋಧರ ಸಾಹಸ ಹಾಗೂ ಭಾರತೀಯ ಸೇನೆಯ ಶಕ್ತಿಯನ್ನು ಜಗತ್ತಿಗೆ ತೋರಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ರಕ್ಷಣಾ ಸಚಿವರಿಗೆ ಧನ್ಯವಾದಗಳನ್ನು ಅರ್ಪಿಸಲಾಗಿದೆ.
ತ್ರಿವಿಧ ಪಡೆಗಳ ಸ್ತಬ್ಧಚಿತ್ರಗಳು & ವೈಮಾನಿಕ ಜಲಕ್:
ಸೂರ್ಯ ಕಿರಣ್ ಏರ್ ಶೋ: ಅಕ್ಟೋಬರ್ 18, 19 ಮತ್ತು 20 ರಂದು ನಾಸಿಕ್/ಬೀದರ್‌ನಿಂದ ಆಗಮಿಸಲಿರುವ ಭಾರತೀಯ ವಾಯುಪಡೆಯ ‘ಸೂರ್ಯ ಕಿರಣ್’ ಬಿಎಇ ಹಾಕ್ (BAE Hawk) ವಿಮಾನಗಳು ಮೈಸೂರಿನ ಆಕಾಶದಲ್ಲಿ ರೋಮಾಂಚಕ ವೈಮಾನಿಕ ಕಸರತ್ತು ನೀಡಲಿವೆ.
ತ್ರಿವಿಧ ಪಡೆಗಳ ಸ್ತಬ್ಧಚಿತ್ರ: ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಬರಿ ವಾಯುಪಡೆಯಷ್ಟೇ ಅಲ್ಲದೆ, ಭೂಸೇನೆ, ನೌಕಾಪಡೆ ಹಾಗೂ ವಾಯುಪಡೆ ಹೀಗೆ ಮೂರೂ ಸಶಸ್ತ್ರ ಪಡೆಗಳ (Three Wings of Defence Forces) ವೈಭವ ಸಾರುವ ವಿಶೇಷ ಸ್ತಬ್ಧಚಿತ್ರಗಳು (Tableaux) ಪಾಲ್ಗೊಳ್ಳಲಿವೆ.
ಇದನ್ನೂ ಓದಿ: ಮೈಸೂರು ದಸರಾ 2026 ಸಿದ್ಧತೆ ಚುರುಕು: ಮೈಸೂರು ಜಿ.ಪಂ.ನಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ
ದೇಶಭಕ್ತಿ ಮತ್ತು ರಾಜಸಂಭ್ರಮ: ಈ ಶಕ್ತಿಪ್ರದರ್ಶನವು ಸಾಂಪ್ರದಾಯಿಕ ದಸರಾ ಆಚರಣೆಗೆ ಬೃಹತ್ ಪ್ರಮಾಣದ ಗಾಂಭೀರ್ಯ, ದೇಶಭಕ್ತಿ ಹಾಗೂ ಜನರಲ್ಲಿ ಶಿಸ್ತಿನ ಸಂದೇಶ ರವಾನಿಸಲಿದೆ. “ಮೈಸೂರು ದಸರಾ ನಾಡಿನ ಪ್ರತಿಯೊಬ್ಬ ನಾಗರಿಕನ ಹಬ್ಬ. ಈ ಬಾರಿಯ ಮಹೋತ್ಸವವನ್ನು ಇನ್ನಷ್ಟು ವರ್ಣರಂಜಿತ, ಜನಸ್ನೇಹಿ ಹಾಗೂ ಸ್ಮರಣೀಯವಾಗಿಸುವುದು ನಮ್ಮ ಉದ್ದೇಶ” ಎಂದು ಸಿಎಂ ಡಿಕೆ ಶಿವಕುಮಾರ್ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

