ಬೈಕ್‌ಗೆ ಡಿಕ್ಕಿ ಹೊಡೆದು ಮೂವರ ಪ್ರಾಣ ತೆಗೆದ ಐಷಾರಾಮಿ ಕಾರು; ಸಿಕ್ಕಿಬಿದ್ದ ಬಳಿಕವೂ ತಂದೆಯ ಹೆಸ ಹೇಳಿ ದರ್ಪ ತೋರಿದ ಆರೋಪಿ

ಕೊಚ್ಚಿ : ಕೇರಳದ ಎರ್ನಾಕುಲಂ ಜಿಲ್ಲೆಯ ನೆಡುಂಬಸ್ಸೆರಿ ಬಳಿ ಅತಿವೇಗ ಮತ್ತು ಅಮಲಿನಲ್ಲಿ ಬಂದ ಐಷಾರಾಮಿ ಮಿನಿ ಕೂಪರ್  ಕಾರೊಂದು ಬೈಕ್‌ಗೆ ಹಿಂದಿನಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಕರ್ನಾಟಕದ ಸುಳ್ಯ ಮೂಲದ ಯುವಕ ಹಾಗೂ ಆತನ ಇಬ್ಬರು ಮಹಿಳಾ ಸಹೋದ್ಯೋಗಿಗಳು ಸ್ಥಳದಲ್ಲೇ ದುರ್ಮರಣಕ್ಕೀಳಾಗಿದ್ದಾರೆ.

ಮೃತ ದುರ್ದೈವಿಗಳನ್ನು ಕರ್ನಾಟಕದ ಸುಳ್ಯದ ಇಯಾಸ್, ವಯನಾಡ್‌ನ ದೇವಿಕಾ (ದೀಪಿಕಾ) ಹಾಗೂ ಕ್ಕಾಡ್ ಜಿಲ್ಲೆಯ ಮನ್ನಾರ್ಕಾಡ್‌ನ ಗೋಪಿಕಾ ಎಂದು ಗುರುತಿಸಲಾಗಿದೆ. ನೆಡುಂಬಸ್ಸೆರಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಭಾನುವಾರ ಮುಂಜಾನೆ ಅಂದಾಜು 1:45 ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.

ಮೂಳಿಯಲ್ ಬಳಿಯ ಸುವರ್ಣೋದ್ಯಾನಂ ಸಮೀಪ ಬೈಕ್‌ನಲ್ಲಿ ತೆರಳುತ್ತಿದ್ದ ಮೂವರ ಮೇಲೆ ಆರೋಪಿ ಸುಹೈಲ್ ಅತಿವೇಗವಾಗಿ ಮಿನಿ ಕೂಪರ್ ಕಾರನ್ನು ಹಾಯಿಸಿದ್ದಾನೆ. ಕಾರಿನ ರಭಸವಾದ ಡಿಕ್ಕಿಯ ತೀವ್ರತೆಗೆ ಬೈಕ್‌ನಲ್ಲಿದ್ದ ಮೂವರು ರಸ್ತೆಗೆ ಬಿದ್ದು, ತಲೆ ಹಾಗೂ ದೇಹಕ್ಕೆ ತೀವ್ರ ಸ್ವರೂಪದ ಮಾರಕ ಪೆಟ್ಟುಗಳು ಬಿದ್ದವು.

ಇದನ್ನೂ ಓದಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ವಿಮಾನದಲ್ಲೇ ಕಸ್ಟಡಿಗೆ; ಇನ್ಸ್ಟಾಗ್ರಾಮ್ ಲೈವ್‌ ವೇಳೆ ಕಂಟ್ರೋಲ್‌ಗೆ ತಗೆದುಕೊಂಡ ಪೊಲೀಸ್

ಗಂಭೀರವಾಗಿ ಗಾಯಗೊಂಡಿದ್ದ ಇಯಾಸ್ ಹಾಗೂ ದೇವಿಕಾ ಅವರನ್ನು ಸಮೀಪದ ಆಸ್ಪತ್ರೆಗೆ ಮತ್ತು ಗೋಪಿಕಾ ಅವರನ್ನು ಅಂಕಮಾಲಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರೊಳಗೆ ಮೂವರೂ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದರು.

ಪ್ರಾಥಮಿಕ ಮೂಲಗಳ ಪ್ರಕಾರ, ಆರೋಪಿ ಸುಹೈಲ್ ಕನಿಷ್ಠ 200 ಕಿ.ಮೀ ವೇಗದಲ್ಲಿ ಡ್ರಗ್ಸ್ ನಶೆಯಲ್ಲಿ ಕಾರು ಚಲಾಯಿಸುತ್ತಿದ್ದನೆಂದು ಶಂಕಿಸಲಾಗಿದೆ. ಅಪಘಾತದ ಬಳಿಕ ಪರಾರಿಯಾಗಲು ಯತ್ನಿಸಿದ ಆತನನ್ನು ಸ್ಥಳೀಯ ಸಾರ್ವಜನಿಕರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.  ಸಿಕ್ಕಿಬಿದ್ದ ಬಳಿಕವೂ ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದ ಆರೋಪಿ ಸುಹೈಲ್, ತನ್ನ ತಂದೆ ಎಲ್ಲವನ್ನೂ ನೋಡಿಕೊಳ್ಳುತ್ತಾರೆ (ನನ್ನ ತಂದೆ ಪರಿಸ್ಥಿತಿಯನ್ನು ಸರಿಪಡಿಸುತ್ತಾರೆ) ಎಂದು ಅಹಂಕಾರದಿಂದ ಬೆದರಿಕೆ ಹಾಕಿದ್ದಾನೆ.

ಆರೋಪಿ ಸುಹೈಲ್ ಐಷಾರಾಮಿ ಕಾರುಗಳನ್ನು ಅತ್ಯಂತ ಅಪಾಯಕಾರಿ ವೇಗದಲ್ಲಿ ಓಡಿಸಿ, ಆ ವಿಡಿಯೋಗಳನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈತ ಸಾಮಾಜಿಕ ಜಾಲತಾಣದಲ್ಲಿ 1 ಮಿಲಿಯನ್ (10 ಲಕ್ಷ) ಫಾಲೋವರ್ಸ್ ಹೊಂದಿರುವ ‘ಇಹಾ ಡಿಸೈನ್’  ಬ್ಯುಸಿನೆಸ್ ಪುಟದ ಮಾಲೀಕರ ಪುತ್ರ ಎಂದು ತಿಳಿದುಬಂದಿದೆ. ನೆಡುಂಬಸ್ಸೆರಿ ಪೊಲೀಸರು ಆರೋಪಿ ವಿರುದ್ಧ ವಿವಿಧ  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಮುಂದುವರೆಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ