ದೆಹಲಿ : ನಿಷೇಧಾಜ್ಞೆಯನ್ನು ಉಲ್ಲಂಘಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಗೇಟ್ ಹಾರಿ ಪ್ರತಿಭಟನೆ ನಡೆಸಲು ಯತ್ನಿಸಿದ ‘ಕಾಕ್ರೋಚ್ ಜನತಾ ಪಕ್ಷ’ದ (CJP) ಮೂವರು ಪ್ರಮುಖ ನಾಯಕರಾದ ಸೌರವ್ ದಾಸ್, ಅಶುತೋಶ್ ರಂಕಾ ಹಾಗೂ ಅಜಿಂಕ್ಯ ಶಿಂಧೆ ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯವು ಅವರಿಗೆ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಜಂತರ್ ಮಂತರ್ನಲ್ಲಿ ಸಭೆ ಮತ್ತು ಪ್ರತಿಭಟನೆ ನಡೆಸುವುದಕ್ಕೆ ನಿಷೇಧವಿದ್ದರೂ, ಅದನ್ನು ಲೆಕ್ಕಿಸದೆ CJP ನಾಯಕರು ಗೇಟ್ ಹಾರಿ ಒಳ ನುಗ್ಗಲು ಯತ್ನಿಸಿದ್ದರು.
ಸೌರವ್ ದಾಸ್ ಹಾಗೂ ಅಶುತೋಶ್ ರಂಕಾ ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163 ಅನ್ನು ಮತ್ತೊಮ್ಮೆ ಉಲ್ಲಂಘಿಸಿರುವುದು ದೆಹಲಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅತಿಕ್ರಮಣ (Trespassing), ಬಾಂಡ್ ಷರತ್ತುಗಳ ಉಲ್ಲಂಘನೆ ಹಾಗೂ ಕರ್ತವ್ಯನಿರತ ಸಾರ್ವಜನಿಕ ಅಧಿಕಾರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಇವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಅಕ್ಟೋಬರ್ 14 ರಂದು ಮಂಗಳವಾರ ಮುಂಜಾನೆ ಇವರನ್ನು ಎಸ್ಸಿಎಂ (SCM) ನ್ಯಾಯಾಲಯಕ್ಕೆ ಹಾರುಪಡಿಸಲಾಯಿತು.
CJP ನಾಯಕರಿಗೆ ತಮ್ಮ ವಕೀಲರನ್ನು ಭೇಟಿ ಮಾಡಲು ತಡರಾತ್ರಿಯವರೆಗೆ ಅವಕಾಶ ನೀಡಿರಲಿಲ್ಲ ಎಂದು ವಕೀಲರಾದ ರತ್ನ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಬಳಿಕ ರಾತ್ರಿ ಸುಮಾರು 3 ಗಂಟೆಗೆ ಅವರನ್ನು ಖಾಸಗಿ ವಾಹನದಲ್ಲಿ ಸಂಸತ್ ರಸ್ತೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಪೊಲೀಸ್ ಕ್ರಮ ಕಾನೂನುಬಾಹಿರವಾಗಿದ್ದರೂ ನಾಯಕರು ಧೃತಿಗೆಡದೆ ಧೈರ್ಯದಿಂದ ಇದ್ದಾರೆ ಎಂದು ಅಭಿಜಿತ್ ದೀಪ್ಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ವಿಮಾನದಲ್ಲೇ ಕಸ್ಟಡಿಗೆ; ಇನ್ಸ್ಟಾಗ್ರಾಮ್ ಲೈವ್ ವೇಳೆ ಕಂಟ್ರೋಲ್ಗೆ ತಗೆದುಕೊಂಡ ಪೊಲೀಸ್
ಜಂತರ್ ಮಂತರ್ ಪ್ರತಿಭಟನಾ ನಿಷೇಧ ಆದೇಶ:
ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ CJP ಸೇರಿದಂತೆ ವಿವಿಧ ಸಂಘಟನೆಗಳು ದೆಹಲಿಯಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಕ್ಟೋಬರ್ 11 ರಂದು ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರು ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಸಿಬಿಡಿ ಮೈದಾನಗಳನ್ನು ಅಧಿಕೃತ ಪ್ರತಿಭಟನಾ ಸ್ಥಳಗಳೆಂದು ಆದೇಶ ಹೊರಡಿಸಿದ್ದು, ಜಂತರ್ ಮಂತರ್ ಅನ್ನು ಅಧಿಕೃತ ಸ್ಥಳಗಳ ಪಟ್ಟಿಯಿಂದ ಕೈಬಿಡಲಾಗಿದೆ ಈ ಆದೇಶವನ್ನು ವಿರೋಧಿಸಿ ಮಂಗಳವಾರ CJP ನಾಯಕರು ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

