ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಸುಳ್ಯದಲ್ಲಿ ‘ಸೇವಾಸೇತು’ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕಿ ಭಾಗೀರಥಿ ಮುರುಳ್ಯ

ಸುಳ್ಯ: ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಅಂಗವಾಗಿ ಸುಳ್ಯದಲ್ಲಿ ‘ಸೇವಾಸೇತು’ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಭಾಗೀರಥಿ ಮುರುಳ್ಯ ಅವರು ದೀಪ ಬೆಳಗಿಸಿ ಈ ಅಭಿಯಾನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮೆಸ್ಕಾಂ ಎಇಇ ಹರೀಶ್ ನಾಯ್ಕ್, ಸೆಲ್ಕೋ ಸೋಲಾರ್ ಮ್ಯಾನೇಜರ್ ಅಶಿಕ್ ಹಾಗೂ ಮೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿದ್ಯುತ್ ಗ್ರಾಹಕರಿಗೆ ಯೋಜನೆ ಕುರಿತು ಮಾಹಿತಿ ನೀಡಲು ಹಾಗೂ ಸ್ಥಳದಲ್ಲೇ ಅರ್ಜಿ ನೋಂದಾಯಿಸಿ ಸದುಪಯೋಗಪಡಿಸಿಕೊಳ್ಳಲು ಮೆಸ್ಕಾಂ ಸುಳ್ಯ ಉಪವಿಭಾಗ ವ್ಯಾಪ್ತಿಯಲ್ಲಿ ಅಕ್ಟೋಬರ್ 14 ರಿಂದ 16 ರವರೆಗೆ ‘ಸೇವಾ ಸೇತು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಈ ಕಾರ್ಯಕ್ರಮದಲ್ಲಿ ಅನುಮೋದಿತ ಸೋಲಾರ್ ಮಾರಾಟಗಾರರು ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳು ಉಪಸ್ಥಿತರಿದ್ದು, ಸೋಲಾರ್ ಘಟಕ ಸ್ಥಾಪನೆ ಮತ್ತು ಸಾಲ ಸೌಲಭ್ಯದ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದಾರೆ.

ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಎಂದರೇನು?:

  • ಇದು ಮನೆಗಳ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ (Rooftop Solar) ವ್ಯವಸ್ಥೆ ಅಳವಡಿಸಲು ಪ್ರೋತ್ಸಾಹಿಸುವ ಕೇಂದ್ರ ಸರ್ಕಾರದ ಮಹತ್ವಾಪಕ್ಷೆಯ ಯೋಜನೆಯಾಗಿದೆ.

  • ಮನೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸುವುದು, ಸೌರಶಕ್ತಿಯಿಂದ ಮನೆಯ ವಿದ್ಯುತ್ ಅಗತ್ಯವನ್ನು ಪೂರೈಸುವುದು ಮತ್ತು ವಿದ್ಯುತ್ ಬಿಲ್ ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ.

  • ಅರ್ಹ ಕುಟುಂಬಗಳಿಗೆ ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ ಅಥವಾ ಕಡಿಮೆ ವೆಚ್ಚದ ವಿದ್ಯುತ್ ಪಡೆಯಲು ಈ ಯೋಜನೆಯು ಸಹಾಯ ಮಾಡುತ್ತದೆ. ಅಲ್ಲದೆ, ಸೌರಶಕ್ತಿಯ ಬಳಕೆಯನ್ನು ಹೆಚ್ಚಿಸಿ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ : ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರು ಅಪಘಾತ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು

ಸಬ್ಸಿಡಿ ಸೌಲಭ್ಯ:

  • ಮನೆ ಮೇಲ್ಚಾವಣಿಯ ಸೌರ ವ್ಯವಸ್ಥೆ ಅಳವಡಿಸಿಕೊಳ್ಳಲು ಸರ್ಕಾರದಿಂದ ಕೇಂದ್ರ ಹಣಕಾಸು ಸಹಾಯ ಅಂದರೆ ಸಬ್ಸಿಡಿ ಲಭ್ಯವಿರುತ್ತದೆ.

  • ಅಳವಡಿಸುವ ಸೌರ ವ್ಯವಸ್ಥೆಯ ಸಾಮರ್ಥ್ಯಕ್ಕೆ (Capacity) ಅನುಗುಣವಾಗಿ ಈ ಸಬ್ಸಿಡಿಯ ಮೊತ್ತವು ಬದಲಾಗುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ