ಹೊಸದೆಹಲಿ: ದೇಶದ ಪ್ರತಿಯೊಬ್ಬ ಪ್ರಜೆಯಂತೆ ಮಕ್ಕಳಿಗೂ ಇಂಟರ್ನೆಟ್ ಸಂಪರ್ಕ ಪಡೆಯುವುದು ಮತ್ತು ಅದನ್ನು ಬಳಸುವುದು ಸಂವಿಧಾನಾತ್ಮಕ ಮೂಲಭೂತ ಹಕ್ಕಾಗಿದೆ ಎಂದು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ, ಇಂಟರ್ನೆಟ್ ಬಳಕೆಯ ಮೇಲೆ ವಯಸ್ಸಿನ ಆಧಾರದ ಮೇಲೆ ಸಂಪೂರ್ಣ ನಿಷೇಧ (Blanket Ban) ಹೇರಲು ನ್ಯಾಯಪೀಠ ನಿರಾಕರಿಸಿದೆ.
ಭಾರತೀಯ ಸಂವಿಧಾನದ ವಿಧಿ 21 ಮತ್ತು 19(1)(a) ರ ಅಡಿಯಲ್ಲಿ ಇಂಟರ್ನೆಟ್ ಪ್ರವೇಶ ಮತ್ತು ಬಳಕೆಯು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕಾಗಿದೆ. “ನಮ್ಮ ಮಕ್ಕಳು, ಅವರ ವಯಸ್ಸನ್ನು ಲೆಕ್ಕಿಸದೆ, ಇತರರಂತೆಯೇ ಸಮಾನ ಹಕ್ಕುಗಳನ್ನು ಅನುಭವಿಸುತ್ತಾರೆ. ನಿರ್ದಿಷ್ಟ ವಯಸ್ಸಿಗಿಂತ ಕೆಳಗಿನ ಮಕ್ಕಳಿಗೆ ರಕ್ಷಿಸಲು ಯೋಗ್ಯವಾದ ಮನಸ್ಸಾಕ್ಷಿ ಇಲ್ಲ ಅಥವಾ ವ್ಯಕ್ತಪಡಿಸಲು ಯೋಗ್ಯವಾದ ವಾಕ್ ಸ್ವಾತಂತ್ರ್ಯವಿಲ್ಲ ಎಂದು ಹೇಳುವುದು ಎಷ್ಟು ಹಾಸ್ಯಾಸ್ಪದವೋ, ಇಂಟರ್ನೆಟ್ ನಿಷೇಧಿಸುವುದು ಸಹ ಅಷ್ಟೇ ಹಾಸ್ಯಾಸ್ಪದ” ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಅಭಿಪ್ರಾಯಪಟ್ಟಿದೆ. “ಮಕ್ಕಳ ಸುರಕ್ಷತೆ ಮತ್ತು ಅವರ ಸ್ವಾತಂತ್ರ್ಯ ಒಂದಕ್ಕೊಂದು ವಿರುದ್ಧವಾದುದಲ್ಲ. ನಮ್ಮ ಮಕ್ಕಳಿಗೆ ಇವೆರಡರ ಹಕ್ಕೂ ಇದೆ” ಎಂದು ನ್ಯಾಯಮೂರ್ತಿ ಜೆ. ಬಿ. ಪಾರ್ದಿವಾಲಾ ಹಾಗೂ ನ್ಯಾಯಮೂರ್ತಿ ಕೆ. ವಿ. ಚಂದ್ರನ್ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಖಡಕ್ ಸೂಚನೆ:
‘ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಅಲೈಯನ್ಸ್’ (Just Rights For Children Alliance) ಎಂಬ ಮಕ್ಕಳ ಹಕ್ಕುಗಳ ಎನ್ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠವು, ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ದೃಶ್ಯಾವಳಿಗಳನ್ನು (CSEAM) ನಿಯಂತ್ರಿಸಲು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ:
ಪೋಷಕರ ನಿಯಂತ್ರಣ (Parental Controls): ವಯಸ್ಸಿನ ಆಧಾರದ ಮೇಲೆ ಇಂಟರ್ನೆಟ್ ನಿಷೇಧಿಸುವ ಬದಲು, ಕಟ್ಟುನಿಟ್ಟಿನ ಪೋಷಕರ ನಿಯಂತ್ರಣಗಳು, ಸೋಶಿಯಲ್ ಮೀಡಿಯಾಗಳಲ್ಲಿ ‘ಚೈಲ್ಡ್ ಮೋಡ್’ (Child Mode) ಆಯ್ಕೆಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ.
ಕೇಂದ್ರಕ್ಕೆ ನಿರ್ದೇಶನ: ತಕ್ಷಣವೇ ಅಂತಹ ಸಮಾಜಘಾತುಕ ಹಾಗೂ ಲೈಂಗಿಕ ದೌರ್ಜನ್ಯದ ಡಿಜಿಟಲ್ ಲಿಂಕ್ಗಳನ್ನು (URL) ಪತ್ತೆಹಚ್ಚಿ ಡಿಲೀಟ್ ಮಾಡಲು ಕೇಂದ್ರ ಸರ್ಕಾರ ರಾಷ್ಟ್ರೀಯ ಡೇಟಾಬೇಸ್ ಸೃಷ್ಟಿಸಬೇಕು ಮತ್ತು ಕಾರ್ಯಾಚರಣೆಯ ಪ್ರಕ್ರಿಯೆಗಳನ್ನು (SOP) ರೂಪಿಸಬೇಕು ಎಂದು ಆದೇಶಿಸಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

