ನಾಗಪುರ: “ಭಾರತವನ್ನು ತುಂಡರಿಸಲು ಮತ್ತು ದೇಶದ ಪ್ರಗತಿಯನ್ನು ಕುಂಠಿತಗೊಳಿಸಲು ಪ್ರಭಾವ ಬೀರುತ್ತಿರುವ ದುಷ್ಟ ಶಕ್ತಿಗಳ ಕುತಂತ್ರಗಳು ಎಂದಿಗೂ ಯಶಸ್ವಿಯಾಗುವುದಿಲ್ಲ” ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಮಂಗಳವಾರ ಹೇಳಿದ್ದಾರೆ. ನಾಗಪುರದಲ್ಲಿ ನಡೆದ ವಾರ್ಷಿಕ ವಿಜಯದಶಮಿ ಉತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇವಲ ಸರ್ಕಾರ ಅಥವಾ ಆಡಳಿತ ಬದಲಾವಣೆಯಿಂದ ಪರಿಸ್ಥಿತಿಗಳು ಬದಲಾಗುತ್ತವೆ ಎಂದು ಭಾವಿಸುವುದು ತಪ್ಪು ಎಂದು ಪ್ರತಿಪಾದಿಸಿದರು.
ಕಳೆದ ಕೆಲವು ದಶಕಗಳಿಂದ ಭಾರತವು ನಿರ್ಣಾಯಕ ನೀತಿಗಳ ಮೂಲಕ ಅಭಿವೃದ್ಧಿಯತ್ತ ಧಾವಿಸುತ್ತಿದೆ. ಇದನ್ನು ಸಹಿಸದ ಕೆಲವು ದುಷ್ಟ ಶಕ್ತಿಗಳು ಭಾರತ ಮತ್ತು ಸಂಘ ಪರಿವಾರವನ್ನು ವಿಭಜಿಸಲು (Dismantle) ನಿರಂತರ ಪ್ರಯತ್ನ ನಡೆಸುತ್ತಿವೆ ಎಂದು ಭಾಗವತ್ ಕಿಡಿಕಾರಿದರು.
ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ವಿರುದ್ಧ ನಡೆಯುತ್ತಿರುವ ‘ಎಸ್ಐಆರ್’ (SIR) ಅಕ್ರಮಗಳ ಆರೋಪದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ಕೇವಲ ಪ್ರತಿಭಟನೆ ಅಥವಾ ಚಳವಳಿಗಳು ಪರಿಹಾರ ತರುವುದಿಲ್ಲ. ಪ್ರತಿಯೊಂದು ಸಮಸ್ಯೆಗೆ ಸಮಾಜದ ಒಳಗಿನಿಂದಲೇ ಪರಿಹಾರ ಕಂಡುಕೊಳ್ಳಬೇಕಿದೆ” ಎಂದರು.
ಇದನ್ನೂ ಓದಿ:ಮಂಗಳೂರು ಶಾರದೆ ಶೋಭಾಯಾತ್ರೆ ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ
ರಾಜಕೀಯ ಲಾಭಕ್ಕಾಗಿ ಅಥವಾ ಪ್ರಚೋದನೆಯಿಂದ ನಡೆಸಲ್ಪಡುವ ಪ್ರತಿಭಟನೆಗಳು ಸಮಾಜದಲ್ಲಿ ಉದ್ವಿಗ್ನತೆ, ಅರಾಜಕತೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುತ್ತವೆ ಎಂದು ಭಾಗವತ್ ಎಚ್ಚರಿಸಿದರು. “ಆಡಳಿತಗಾರರು ಅಥವಾ ಸರ್ಕಾರ ಬದಲಾದ ತಕ್ಷಣ ಸಮಾಜದ ಸಂಪೂರ್ಣ ಚಿತ್ರಣ ಬದಲಾಗುತ್ತದೆ ಎಂಬುದು ತಪ್ಪು ಕಲ್ಪನೆ. ಇದು ಹಿಂದೆಂದೂ ಸಂಭವಿಸಿಲ್ಲ ಮತ್ತು ಮುಂದೆಯೂ ಆಗುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

