ಮಂಗಳೂರು: ಮಂಗಳೂರು ತಾಲೂಕಿನ ಕುರ್ನಾಡು ಹಾಗೂ ಬೋಳಿಯಾರ್ ರಸ್ತೆ ಮಧ್ಯೆ ಸ್ಕೂಟರ್ ಮತ್ತು ಪಿಕಪ್ ವಾಹನ ನಡುವೆ ನಡೆದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಣಾಜೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಘಟನೆಯನ್ನು ‘ಕೊಲೆ’ ಎಂದು ಪರಿಗಣಿಸಿ ಪಿಕಪ್ ಚಾಲಕನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ರಸ್ತೆ ಗಲಾಟೆಯ ಹಿನ್ನೆಲೆಯಲ್ಲಿ ಬೇಕೆಂದೇ ಪಿಕಪ್ ವಾಹನವನ್ನು ಸ್ಕೂಟರ್ಗೆ ಡಿಕ್ಕಿ ಹೊಡೆಸಿ ಇಬ್ಬರು ಯುವಕರ ಹತ್ಯೆ ಮಾಡಲಾಗಿದೆ ಎಂದು ಮೃತ ಜುನೈದ್ ಅವರ ತಂದೆ ಇಸ್ಮಾಯಿಲ್ ದೂರು ನೀಡಿದ್ದಾರೆ.
ಸೋಮವಾರ ಸಂಜೆ ಕಿನ್ಯ ಅರೆಬಿನಗರದ ಮಹಮ್ಮದ್ ಅಫ್ರಾಝ್ (22) ಹಾಗೂ ಕಿನ್ಯ ಉಕ್ಕುಡ ನಿವಾಸಿ ಜುನೈದ್ (23) ಸ್ಕೂಟರ್ನಲ್ಲಿ ಚೇಳೂರಿನಿಂದ ನಾಟೇಕಲ್ ಕಡೆಗೆ ತೆರಳುತ್ತಿದ್ದರು. ಈ ವೇಳೆ ರಂತಡ್ಕ ಎಂಬಲ್ಲಿ ಪಿಕಪ್ ಚಾಲಕ ಹಫೀಝ್ ಹಾಗೂ ಯುವಕರ ನಡುವೆ ಸಣ್ಣ ಮಟ್ಟದ ಗಲಾಟೆ ನಡೆದಿತ್ತು. ಗಲಾಟೆಯ ಬಳಿಕ ಆಕ್ರೋಶಗೊಂಡ ಪಿಕಪ್ ಚಾಲಕ ಹಫೀಜ್, ಅಫ್ರಾಝ್ ಹಾಗೂ ಜುನೈದ್ ತೆರಳುತ್ತಿದ್ದ ಸ್ಕೂಟರ್ ಅನ್ನು ಹಿಂಬಾಲಿಸಿಕೊಂಡು ಬಂದಿದ್ದಾನೆ. ಉಳ್ಳಾಲ ತಾಲೂಕಿನ ಬೋಳಿಯಾರ್ ದಾಟಿ ಪಡೀಲ್ ಪೆಟ್ರೋಲ್ ಬಂಕ್ ಬಳಿ ತಲುಪುತ್ತಿದ್ದಂತೆ ಸ್ಕೂಟರ್ಗೆ ಪಿಕಪ್ ವಾಹನವನ್ನು ಜೋರಾಗಿ ಡಿಕ್ಕಿ ಹೊಡೆಸಿದ್ದಾನೆ.
ಇದನ್ನೂ ಓದಿ: ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಾರಿ ಅಡ್ಡಾದಿಡ್ಡಿ ಕೆಮಿಕಲ್ ಅಡಿಕೆ ಜಾಲ ಭೇದಿಸಿದ ಅಧಿಕಾರಿಗಳು: ಕ್ಯಾನ್ಸರ್ತ ರಿಸುವ ಅಪಾಯಕಾರಿ ಬಣ್ಣ ಹಚ್ಚಿ ಮೋಸ
ಪಿಕಪ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಸವಾರ ಮಹಮ್ಮದ್ ಅಫ್ರಾಝ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಜುನೈದ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನವು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೂ ಡಿಕ್ಕಿಯಾಗಿದೆ. ಘಟನೆ ನಡೆದ ತಕ್ಷಣ ಪಿಕಪ್ ಚಾಲಕ ಹಫೀಜ್ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

