ನನ್ನ ಪ್ರೀತಿಯ RSS ಸ್ವಯಂಸೇವಕರೇ … ನನ್ನ ಈ ಸಲಹೆಯನ್ನು ನೀವು ಪಾಲಿಸಲೇಬೇಕು: ವಿಜಯದಶಮಿ ಪಥಸಂಚಲನಕ್ಕೆ ಆದೇಶ ನೀಡಿದ ಖರ್ಗೆ

ಬೆಂಗಳೂರು: ವಿಜಯದಶಮಿ ಉತ್ಸವದ ಅಂಗವಾಗಿ ರಾಜ್ಯಾದ್ಯಂತ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಆಯೋಜಿಸುವ ಪಥಸಂಚಲನಕ್ಕೆ (Route March) ಪೊಲೀಸ್ ಹಾಗೂ ಗೃಹ ಇಲಾಖೆಯಿಂದ ಕೇವಲ ‘ಮಾಹಿತಿ’ ನೀಡುವುದು ಅಥವಾ ‘ಸಹಕರಿಸುವಂತೆ’ ಕೋರುವುದು ಸರಿಯಾದ ಕ್ರಮವಲ್ಲ. ಪ್ರತಿಯೊಂದು ಸಂಸ್ಥೆಗೂ ಅನ್ವಯಿಸುವ ನಿಯಮಾವಳಿಗಳಂತೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅಧಿಕೃತ ಅನುಮತಿ ಪಡೆಯುವುದು ಕಡ್ಡಾಯ ಎಂದು ಗೃಹ ಇಲಾಖೆಯ ಪತ್ರವನ್ನು ಗೃಹಸಚಿವ ಪ್ರಿಯಾಂಕ ಖರ್ಗೆ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ.

ಆರ್‌.ಎಸ್.ಎಸ್. ಕಮಲಾನಗರ ಘಟಕವು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಿಗೆ ಪತ್ರ ಬರೆದು, ಅಕ್ಟೋಬರ್ 25, 2026 (ಭಾನುವಾರ) ಬೆಳಿಗ್ಗೆ 9:00 ಗಂಟೆಗೆ ಪೈಪ್ ಲೈನ್ ರಸ್ತೆಯ ಶಿವನ ದೇವಸ್ಥಾನದ ಮೈದಾನದಿಂದ ಕೆಂಪೇಗೌಡ ಲೇಔಟ್ ಹಾಗೂ ಕಸ್ತೂರಿ ಬಡಾವಣೆ ರಸ್ತೆಗಳ ಮೂಲಕ ಪಥಸಂಚಲನ ನಡೆಸಲಾಗುವುದು ಮತ್ತು ಇದಕ್ಕೆ “ಆರಕ್ಷಕ ವರ್ಗ ಸಹಕರಿಸಬೇಕು” ಎಂದು ಕೋರಿಕೊಂಡಿತ್ತು. ಗೃಹ ಇಲಾಖೆಯ ಮೂಲಗಳ ಪ್ರಕಾರ, ಕೇವಲ “ಸಹಕರಿಸಿ” ಎಂದು ಪತ್ರ ನೀಡುವುದು ಕಾನೂನಾತ್ಮಕ ಅನುಮತಿಗೆ ಸಮನಾಗುವುದಿಲ್ಲ. ನಿಯಮಾನುಸಾರ ನಿಗದಿತ ನಮೂನೆಯಲ್ಲಿ ವಿವರವಾದ ಅರ್ಜಿ ಸಲ್ಲಿಸಿ, ಸೂಕ್ತ ಪ್ರಾಧಿಕಾರದಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಗತಿ ವರದಿ 2025-26 ರ ಪ್ರಕಾರವೇ ಕರ್ನಾಟಕದಲ್ಲಿ ನಡೆದ 562 ಪಥಸಂಚಲನಗಳಲ್ಲಿ ಬರೋಬ್ಬರಿ 2,21,963 ಸ್ವಯಂಸೇವಕರು ಭಾಗವಹಿಸಿದ್ದರು. ಲಕ್ಷಾಂತರ ಜನರು ಒಂದೇ ದಿನ, ಒಂದೇ ಸಮಯದಲ್ಲಿ ರಸ್ತೆಗೆ ಇಳಿದು ಪಥಸಂಚಲನ ನಡೆಸುವಾಗ ಟ್ರಾಫಿಕ್ ನಿರ್ವಹಣೆ, ಸಾರ್ವಜನಿಕ ಭದ್ರತೆ, ಸಿಬ್ಬಂದಿ ನಿಯೋಜನೆ, ಸಾರಿಗೆ ಮತ್ತು ಆಹಾರ ವ್ಯವಸ್ಥೆಯಂತಹ ಬೃಹತ್ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಬೇಕಾಗುತ್ತದೆ.

ಪೊಲೀಸ್ ಇಲಾಖೆಯ ಮಾನವ ಸಂಪನ್ಮೂಲ ಹಾಗೂ ಸಾರ್ವಜನಿಕ ಸಂಪನ್ಮೂಲಗಳ ಸಮರ್ಥ ಬಳಕೆಗಾಗಿ ಪಥಸಂಚಲನ ಆಯೋಜಕರು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಮಾರ್ಗದ ಸಂಪೂರ್ಣ ಮಾಹಿತಿ ನೀಡಿ ಅಧಿಕೃತ ಅನುಮತಿಗಾಗಿ ಕಾಯಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಅಪಾರ್ಟ್‌ಮೆಂಟ್‌ಗಳನ್ನು ತಮ್ಮ ಸಿದ್ಧಾಂತ ಬೋಧನೆಗೆ ಬಳಸುವುದು ಸರಿಯೇ?: ಆರ್‌ಎಸ್‌ಎಸ್ ಕಾರ್ಯಕ್ರಮದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ನೇರ ವಾಗ್ದಾಳಿ

ಖರ್ಗೆ ಪೋಸ್ಟ್​​ನಲ್ಲಿ ಏನಿದೆ ?

“ಪ್ರಿಯ ಆರ್‌ಎಸ್‌ಎಸ್ ಸ್ವಯಂಸೇವಕರೇ, ನಿಮಗೆ ದಸರಾ ಹಬ್ಬದ ಶುಭಾಶಯಗಳು. ಗೃಹ ಇಲಾಖೆಗೆ ಕೇವಲ ‘ಮಾಹಿತಿ’ ನೀಡುವುದು ಅಥವಾ ‘ಸಹಕರಿಸಿ/ಅಗತ್ಯ ವ್ಯವಸ್ಥೆ ಮಾಡಿ’ ಎಂದು ಹೇಳುವುದು ಕಾನೂನಾತ್ಮಕ ಅನುಮತಿ ಪಡೆದಂತೆ ಅಲ್ಲ. ಇತರ ಎಲ್ಲಾ ಸಂಸ್ಥೆಗಳಂತೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಅಧಿಕೃತ ಅನುಮತಿಗೆ ಕಾಯಬೇಕು” ಎಂದು ಸಚಿವರು ನೆನಪಿಸಿದ್ದಾರೆ. ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಗತಿ ವರದಿ 2025-26 ರ ಪ್ರಕಾರವೇ ಕರ್ನಾಟಕದಲ್ಲಿ ನಡೆದ 562 ಪಥಸಂಚಲನಗಳಲ್ಲಿ ಬರೋಬ್ಬರಿ 2,21,963 ಸ್ವಯಂಸೇವಕರು ಭಾಗವಹಿಸಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ. ಲಕ್ಷಾಂತರ ಜನರು ಒಂದೇ ದಿನ, ಒಂದೇ ಸಮಯದಲ್ಲಿ ಕರ್ನಾಟಕದ ಬೀದಿಗಳಲ್ಲಿ ಪಥಸಂಚಲನ ನಡೆಸುವಾಗ ಭದ್ರತೆ, ಸಂಚಾರ ನಿರ್ವಹಣೆ, ಸಿಬ್ಬಂದಿ ನಿಯೋಜನೆ, ಆಹಾರ ಹಾಗೂ ಸಾರಿಗೆಯಂತಹ ಬೃಹತ್ ಸಿದ್ಧತೆಗಳನ್ನು ಪೊಲೀಸ್ ಇಲಾಖೆ ಮಾಡಬೇಕಾಗುತ್ತದೆ. ಇದಕ್ಕೆ ಅಪಾರ ಪ್ರಮಾಣದ ಯೋಜನಾ ವೆಚ್ಚ, ಮಾನವಸಂಪನ್ಮೂಲ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಅಗತ್ಯ ವಿವರಗಳನ್ನು ಒದಗಿಸಿ, ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸಕ್ಷಮ ಪ್ರಾಧಿಕಾರದಿಂದ ಅಧಿಕೃತ ಅನುಮತಿ ಪಡೆಯುವವರೆಗೆ ಕಾಯುವಂತೆ ಅವರು ತಿಳಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ