ಹೊಸಕೋಟೆ: ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಅತ್ಯಂತ ಚಾಣಾಕ್ಷತನದಿಂದ ಮೊಬೈಲ್ ಕಳ್ಳತನ ಮಾಡುವುದು ಹೇಗೆ ಎಂಬುದನ್ನು ಕಲಿತುಕೊಂಡಿದ್ದ ಒಡಿಶಾ ಮೂಲದ ಕುಖ್ಯಾತ ಕಳ್ಳನನ್ನು ಹೊಸಕೋಟೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಅಕ್ಟೋಬರ್ 12ರಂದು ಹೊಸಕೋಟೆಯ ‘ದುರ್ಗಾ ಮೊಬೈಲ್’ ಅಂಗಡಿಗೆ ಕನ್ನಹಾಕಿ ಬರೋಬ್ಬರಿ 15 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಮೊಬೈಲ್ಗಳನ್ನು ದೋಚಿದ್ದ ಒಡಿಶಾ ಮೂಲದ 30 ವರ್ಷದ ಶುಭಂ ಸೇನಾಪತಿ ಈಗ ಖಾಕಿ ಬಲೆಗೆ ಬಿದ್ದಿದ್ದಾನೆ. ಬಂಧಿತನಿಂದ ಕಳ್ಳತನವಾಗಿದ್ದ ಇಡೀ 15 ಲಕ್ಷ ರೂ. ಮೌಲ್ಯದ ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಒಡಿಶಾ ಮೂಲದ ಆರೋಪಿ ಶುಭಂ ಸೇನಾಪತಿ ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ವೀಕ್ಷಿಸಿ ಅತ್ಯಂತ ಜಾಣ್ಮೆಯಿಂದ ಕಳ್ಳತನ ಮಾಡುವ ವಿಧಾನಗಳನ್ನು ಕರಗತ ಮಾಡಿಕೊಂಡಿದ್ದನು. ಕೃತ್ಯಕ್ಕಾಗಿ ಆನ್ಲೈನ್ ಮೂಲಕ ಗ್ಯಾಸ್ ಕಟ್ಟರ್ ಅನ್ನು ಕೂಡ ಖರೀದಿಸಿದ್ದ ಎಂಬುದು ತನಿಖೆಯಿಂದ ಬಯಲಾಗಿದೆ.
ಅಕ್ಟೋಬರ್ 12ರ ರಾತ್ರಿ ದುರ್ಗಾ ಮೊಬೈಲ್ ಅಂಗಡಿಯ ಮುಂದೆ ಯಾರ ಗಮನಕ್ಕೂ ಬರದಂತೆ ಟಾರ್ಪಲ್ ಅಡ್ಡ ಕಟ್ಟಿ ಮರೆಮಾಡಿದ್ದ. ನಂತರ ಗ್ಯಾಸ್ ಕಟ್ಟರ್ ಬಳಸಿ ರೋಲಿಂಗ್ ಶಟರ್ ಮುರಿದು ಒಳನುಗ್ಗಿದ ಕಳ್ಳ, ಅಂಗಡಿಯಲ್ಲಿದ್ದ ವಿವಿಧ ಬ್ರ್ಯಾಂಡ್ಗಳ ಲಕ್ಷಾಂತರ ರೂ. ಮೌಲ್ಯದ ಮೊಬೈಲ್ಗಳನ್ನು ದೋಚಿ ಪರಾರಿಯಾಗಿದ್ದ.
ಇದನ್ನೂ ಓದಿ : ಬೆಳ್ತಂಗಡಿ: ಗೆಳೆಯರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ 21 ವರ್ಷದ ಯುವಕ ನೀರಿನಲ್ಲಿ ಮುಳುಗಿ ದುರಂತ ಸಾವು
ಕಳ್ಳತನವೆಸಗುವ ಸಂಪೂರ್ಣ ದೃಶ್ಯಗಳು ಅಂಗಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದವು. ಈ ಸಿಸಿಟಿವಿ ದೃಶ್ಯಾವಳಿಗಳನ್ನು ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಕೈಗೊಂಡ ಹೊಸಕೋಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

