ಹನುಮಾನ್ ಚಾಲೀಸಾ ಪಠಣ ವೇಳೆ ಭಕ್ತನ ಬೆನ್ನ ಮೇಲೆಯೇ ಬಂದು ಕುಳಿತ ವಾನರ

ವಿಜಯಪುರ: ಆಂಧ್ರಪ್ರದೇಶದ ಪ್ರಸಿದ್ಧ ಕಸಾಪುರಂ ಆಂಜನೇಯ ದೇವಸ್ಥಾನದಲ್ಲಿ (Kasapuram Anjaneya Temple) ಅತ್ಯಂತ ಆಶ್ಚರ್ಯಕರ ಹಾಗೂ ದೈವಿಕ ಭಾವ ಮೂಡಿಸುವ ದೃಶ್ಯವೊಂದು ಜರುಗಿದೆ. ಹನುಮಾನ್ ಮಾಲೆ ಧರಿಸಿ ಹನುಮಾನ್ ಚಾಲೀಸಾ ಪಠಿಸುತ್ತಿದ್ದ ವಿಜಯಪುರ ಜಿಲ್ಲೆಯ ಭಕ್ತನೊಬ್ಬನ ಬೆನ್ನ ಮೇಲೆಯೇ ಬಂದು ಕುಳಿತ ವಾನರವೊಂದು, ಸತತ ಒಂದು ಗಂಟೆಗೂ ಹೆಚ್ಚು ಕಾಲ ಶಾಂತಚಿತ್ತದಿಂದ ರಾಮನಾಮ ಹಾಗೂ ಚಾಲೀಸಾ ಪಠಣವನ್ನು ಆಲಿಸಿದೆ.

ಈ ಅಪರೂಪದ ಹಾಗೂ ಪವಾಡಸದೃಶ ಘಟನೆಯನ್ನು ಸ್ಥಳದಲ್ಲಿದ್ದ ಇತರ ಭಕ್ತರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.

ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ನಿವಾಸಿ ಶಾಂತಪ್ಪ ರೂಡಗಿ ಎಂಬ ಭಕ್ತರು, ಆಲಗೂರಿನ ಆಂಜನೇಯ ಸ್ವಾಮಿಯ ಮಾಲೆ ಧರಿಸಿ ಆಂಧ್ರಪ್ರದೇಶದ ಕಸಾಪುರಂ ಆಂಜನೇಯ ದೇವಸ್ಥಾನಕ್ಕೆ ತಪೋನುಷ್ಠಾನಕ್ಕಾಗಿ ತೆರಳಿದ್ದರು. ಕಳೆದ ಮೇ 9ರಂದು ದೇವಸ್ಥಾನದ ಅವರಣದಲ್ಲಿ ಶಾಂತಪ್ಪ ರೂಡಗಿ ಅವರು ಭಕ್ತಿಯಿಂದ ಹನುಮಾನ್ ಚಾಲೀಸಾ ಪಠಿಸುತ್ತಿದ್ದ ವೇಳೆ, ಇದ್ದಕ್ಕಿದ್ದಂತೆ ಬಂದ ವಾನರವೊಂದು ನೇರವಾಗಿ ಆ ಭಕ್ತನ ಬೆನ್ನ ಮೇಲೆ ಹಾಗೂ ಹೆಗಲ ಮೇಲೆ ಬಂದು ಕುಳಿತುಕೊಂಡಿದೆ.

ಇದನ್ನೂ ಓದಿ: ವೃದ್ಧೆ ವಿತ್‌ಡ್ರಾ ಫಾರ್ಮ್‌ನಲ್ಲಿ 2,100 ಬರೆದು 2,000 ರೂ. ನೀಡಿದ ಬ್ಯಾಂಕ್ ಉದ್ಯೋಗಿ; ವಿಡಿಯೋ ವೈರಲ್

ಅಲ್ಲಿದ್ದ ಇತರ ಭಕ್ತರು ಆಹಾರ ನೀಡಿ ತತ್ತರಿಸಲು ಹಾಗೂ ಆ ಮಂಗವನ್ನು ತಮ್ಮ ಬಳಿಗೆ ಕರೆಯಲು ಪ್ರಯತ್ನಿಸಿದರೂ ಸಹ ಅದು ಯಾರ ಬಳಿಗೂ ಹೋಗಲಿಲ್ಲ. ಬದಲಿಗೆ, ಶಾಂತಪ್ಪ ಅವರ ಹೆಗಲ ಮೇಲೆಯೇ ಅತ್ಯಂತ ಪ್ರಶಾಂತವಾಗಿ ಕುಳಿತು ಚಾಲೀಸಾ ಪಠಣ ಮುಗಿಯುವವರೆಗೂ ರಾಮನಾಮವನ್ನು ಶ್ರದ್ಧೆಯಿಂದ ಆಲಿಸಿದೆ. ಸತತ ಒಂದು ಗಂಟೆಗೂ ಹೆಚ್ಚು ಕಾಲ ಭಕ್ತನ ಬೆನ್ನ ಮೇಲೆಯೇ ಕುಳಿತಿದ್ದ ವಾನರವು, ಪಠಣ ಪೂರ್ಣಗೊಂಡ ನಂತರ ತಾನಾಗಿಯೇ ಕೆಳಗಿಳಿದು ದೇವಸ್ಥಾನದ ಕಡೆಗೆ ತೆರಳಿದೆ. ಈ ಅಪರೂಪದ ದೃಶ್ಯವನ್ನು ಕಂಡ ಭಕ್ತಾದಿಗಳು ಸಾಕ್ಷಾತ್ ಆಂಜನೇಯ ಸ್ವಾಮಿಯೇ ವಾನರ ರೂಪದಲ್ಲಿ ಬಂದು ಆಶೀರ್ವಾದ ನೀಡಿದ್ದಾನೆ ಎಂದು ಕೊಂಡಾಡುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ