ಡ್ರಗ್ಸ್ ಸೇವನೆ ಒಪ್ಪಿಕೊಂಡ ಪ್ರಸಿದ್ಧ ಕ್ರಿಕೆಟರ್: 1 ತಿಂಗಳು ಬ್ಯಾನ್

ಲಂಡನ್: ಟಿ20 ಕ್ರಿಕೆಟ್ ಜಗತ್ತಿನ ಸ್ಪೋಟಕ ಬ್ಯಾಟರ್, ಆಸ್ಟ್ರೇಲಿಯಾದ ಕ್ರಿಸ್ ಲಿನ್ (Chris Lynn) ಕೊಕೇನ್ ಸೇವನೆ ಮಾಡಿರುವುದು ಸಾಬೀತಾಗಿದ್ದು, ಅವರ ವಿರುದ್ಧ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ECB) ಒಂದು ತಿಂಗಳ ಕಾಲ ಕ್ರಿಕೆಟ್ ಚಟುವಟಿಕೆಗಳಿಂದ ನಿಷೇಧ ಹೇರಿದೆ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಬ್ಲಾಸ್ಟ್ (T20 Blast) ಟೂರ್ನಿಯ ವೇಳೆ ನಡೆದ ಡೋಪಿಂಗ್ ಪರೀಕ್ಷೆಯಲ್ಲಿ ಕೊಕೇನ್ ಪತ್ತೆಯಾದ ಬೆನ್ನಲ್ಲೇ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಕಳೆದ ಜುಲೈ 18, 2026 ರಂದು ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಬ್ಲಾಸ್ಟ್ ಟೂರ್ನಿಯ ಸಂದರ್ಭದಲ್ಲಿ ಕ್ರಿಸ್ ಲಿನ್ ಅವರ ಮಾದರಿಯನ್ನು ಡೋಪಿಂಗ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಪರೀಕ್ಷಾ ವರದಿಯಲ್ಲಿ ನಿಷೇಧಿತ ‘ಕೊಕೇನ್’ ಪತ್ತೆಯಾದ ನಂತರ, ವಿಚಾರಣೆಯ ವೇಳೆ ಲಿನ್ ಅವರು ಪಂದ್ಯಾವಳಿಗಿಂತ ಕೆಲವು ದಿನಗಳ ಮುನ್ನ ವೈಯಕ್ತಿಕ ಕಾರಣಗಳಿಗಾಗಿ ಕೊಕೇನ್ ಸೇವನೆ ಮಾಡಿದ್ದಾಗಿ ತಪ್ಪು ಒಪ್ಪಿಕೊಂಡಿದ್ದರು.

Advertisement

ಕ್ರಿಸ್ ಲಿನ್ ಅವರು ಕ್ರೀಡೆಯಲ್ಲಿ ತಮ್ಮ ಕಾರ್ಯಕ್ಷಮತೆ (Performance) ಹೆಚ್ಚಿಸಿಕೊಳ್ಳಲು ಈ ಡ್ರಗ್ಸ್ ಬಳಸಿಲ್ಲ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ. ತಪ್ಪು ಒಪ್ಪಿಕೊಂಡ ತಕ್ಷಣವೇ ಅವರು ಇಸಿಬಿಯ ಪುನರ್ವಸತಿ (Rehabilitation) ಮತ್ತು ಕೌನ್ಸಿಲಿಂಗ್ ಕಾರ್ಯಕ್ರಮಕ್ಕೆ ಒಳಪಟ್ಟರು. ಈ ಸಕಾರಾತ್ಮಕ ನಡವಳಿಕೆಗಳ ಹಿನ್ನೆಲೆಯಲ್ಲಿ ಅವರ ಮೇಲಿನ ನಿಷೇಧದ ಅವಧಿಯನ್ನು ಕೇವಲ ಒಂದು ತಿಂಗಳಿಗೆ (ಜುಲೈ 31 ರಿಂದ ಆಗಸ್ಟ್ 30 ರವರೆಗೆ) ಕಡಿತಗೊಳಿಸಲಾಯಿತು.

ಇದನ್ನೂ ಓದಿ: ಕೊನೆಯ ಎಸೆತ ಎಸೆದಿದ್ದೇನೆ: ಟೆಸ್ಟ್ ಕ್ರಿಕೆಟ್‌ಗೆ ಮೊಹಮ್ಮದ್ ಶಮಿ ನಿವೃತ್ತಿ ಘೋಷಣೆ,

Advertisement

ಇಸಿಬಿ ಗೌಪ್ಯತೆ ಕಾಪಾಡಿದ್ದೇಕೆ?:

ಇಂಗ್ಲೆಂಡ್‌ನ ಕ್ರಿಕೆಟ್ ನಿಯಂತ್ರಕ ಮಂಡಳಿ ಮತ್ತು ಆಂಟಿ-ಡೋಪಿಂಗ್ ಸಂಸ್ಥೆಗಳ ನಿಯಮದ ಪ್ರಕಾರ, ಕ್ರೀಡಾಪಟುಗಳು ಸ್ಪರ್ಧೆಯಿಂದ ಹೊರಗಿದ್ದಾಗ ವೈಯಕ್ತಿಕ ಕಾರಣಗಳಿಗಾಗಿ ಇಂತಹ ತಪ್ಪುಗಳನ್ನು ಒಪ್ಪಿಕೊಂಡರೆ, ಅವರ ಖಾಸಗಿತನ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಪ್ರಕರಣವನ್ನು ತಕ್ಷಣವೇ ಸಾರ್ವಜನಿಕಗೊಳಿಸುವುದಿಲ್ಲ.

Advertisement

ಕ್ರಿಸ್ ಲಿನ್ ಅವರು ಜುಲೈ 31 ರಿಂದ ಆಗಸ್ಟ್ 30 ರವರೆಗಿನ ತಮ್ಮ ನಿಷೇಧದ ಅವಧಿಯಲ್ಲಿ ಪುನರ್ವಸತಿ ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸುವವರೆಗೆ ತನಿಖಾ ಪ್ರಕ್ರಿಯೆಗಳು ಗೌಪ್ಯವಾಗಿ ಮುಂದುವರಿದಿದ್ದವು. ಇದೀಗ ತನಿಖೆ, ವೈದ್ಯಕೀಯ ವರದಿಗಳು ಮತ್ತು ಶಿಕ್ಷೆಯ ಅವಧಿ ಸಂಪೂರ್ಣವಾಗಿ ಮುಗಿದ ನಂತರವೇ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತನ್ನ ಅಧಿಕೃತ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದೆ.

ಕ್ರೀಡಾಪಟುಗಳು ಮೈದಾನದ ಒಳಗೆ ಮಾತ್ರವಲ್ಲದೆ ಮೈದಾನದ ಹೊರಗೂ ಯುವ ಪೀಳಿಗೆಗೆ ಮಾದರಿಯಾಗಿರಬೇಕು ಎಂಬುದನ್ನು ಈ ಪ್ರಕರಣ ಮತ್ತೊಮ್ಮೆ ನಿರೂಪಿಸಿದೆ. ಸದ್ಯಕ್ಕೆ ಒಂದು ತಿಂಗಳ ನಿಷೇಧದ ಶಿಕ್ಷೆಯನ್ನು ಪೂರ್ಣಗೊಳಿಸಿ ಕಣಕ್ಕಿಳಿಯಲು ಸಜ್ಜಾಗಿರುವ ಲಿನ್, ಮುಂಬರುವ ದಿನಗಳಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಈ ವಿವಾದವನ್ನು ಮರೆಮಾಚುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ