ಸ್ಪೇನ್‌ನತ್ತ ಹೊರಟಿದ್ದ ಹಡಗು ಸಮುದ್ರದಲ್ಲಿ ಭೀಕರ ಪಲ್ಟಿ: 39 ವಲಸಿಗರು ದಾರುಣ ಸಾವು

ಡಾಕರ್: ಆಫ್ರಿಕಾ ಖಂಡದ ಸೆನೆಗಲ್ ಕರಾವಳಿಯಲ್ಲಿ ಭೀಕರ ಸಮುದ್ರ ದುರಂತವೊಂದು ಸಂಭವಿಸಿದ್ದು, ಯುರೋಪ್‌ನ ಸ್ಪೇನ್‌ ದೇಶಕ್ಕೆ ತೆರಳಲು ಯತ್ನಿಸುತ್ತಿದ್ದ ವಲಸಿಗರಿದ್ದ  ಹಡಗು ಸಮುದ್ರದಲ್ಲಿ ಪಲ್ಟಿಯಾಗಿದೆ. ಈ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಉತ್ತರ ಸೆನೆಗಲ್‌ನ ಸೇಂಟ್ ಲೂಯಿಸ್‌ನಿಂದ  ಹೊರಟಿದ್ದ ಈ ಹಡಗು, ಸ್ಪೇನ್‌ಗೆ ತಲುಪುವ ಮಾರ್ಗದಲ್ಲಿ ರಾಜಧಾನಿ ಡಾಕರ್ ಉತ್ತರಕ್ಕಿರುವ ಕೆಬೆ-ಮೆರ್ ಪಟ್ಟಣದ ಸಮುದ್ರ ದಂಡೆಯ ಸಮೀಪದಲ್ಲಿ ನಿಯಂತ್ರಣ ತಪ್ಪಿ ಭಾನುವಾರ ರಾತ್ರಿ ಮುಳುಗಡೆಯಾಗಿತ್ತು.

ಉತ್ತಮ ಜೀವನೋಪಾಯದ ಹುಡುಕಾಟದಲ್ಲಿ ನೂರಾರು ಯುವ ವಲಸಿಗರು ಅಪಾಯಕಾರಿ ಸಮುದ್ರ ಮಾರ್ಗವಾಗಿ ಸ್ಪೇನ್ ದೇಶದ ಕಡೆಗೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು. ಕೆಬೆ-ಮೆರ್ ಕರಾವಳಿಯ ಸಮುದ್ರದಲ್ಲಿ ಚಲಿಸುತ್ತಿದ್ದಂತೆ ಅಲೆಗಳ ಭರಾಟೆಗೆ ಹಡಗು ಬಲಿಬಿದ್ದು ಸಾಗರದಲ್ಲಿ ಪಲ್ಟಿಯಾಗಿದೆ. ಸೆನೆಗಲ್ ದೇಶದ ಆಪತ್ಕಾಲೀನ ಹಾಗೂ ತುರ್ತು ರಕ್ಷಣಾ ಪಡೆಯ (Emergency Services) ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಸೋಮವಾರದ ವೇಳೆಗೆ 39 ಶವಗಳನ್ನು ಹೊರತೆಗೆಯಲಾಗಿದೆ.

Advertisement

ಇದನ್ನೂ ಓದಿ: ಕಂಫರ್ಟ್ ಜೋನ್ ನಿಮ್ಮ ಗುರಿಯನ್ನು ಮರೆಸಬಹುದು!’: ವಿದೇಶದಲ್ಲಿ ಪಾರ್ಟ್-ಟೈಮ್ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ ಭಾರತೀಯ ಮಹಿಳೆಯ ಎಚ್ಚರಿಕೆ

ಅಧ್ಯಕ್ಷ ಬಸ್ಸಿರೋ ಡಿಯೋಮೆ ಸಂತಾಪ: ಅಕ್ರಮ ಜಾಲಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ!

Advertisement

ಈ ಘೋರ ಸಾಗರ ದುರಂತಕ್ಕೆ ಸೆನೆಗಲ್ ದೇಶದ ಅಧ್ಯಕ್ಷ ಬಸ್ಸಿರೋ ಡಿಯೋಮೆ ಫಾಯೆ  ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿರುವ ಅವರು, “ಸಮುದ್ರ ಮಾರ್ಗದ ಮೂಲಕ ಇಂತಹ ಅಪಾಯಕಾರಿ ಅಕ್ರಮ ವಲಸೆ ನೆಟ್‌ವರ್ಕ್‌ಗಳನ್ನು ನಡೆಸುತ್ತಿರುವ ದಲ್ಲಾಳಿಗಳು ಮತ್ತು ಜಾಲಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಿದೆ” ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement