ಬೆಂಗಳೂರು: ರಾಜಧಾನಿಯ ಖ್ಯಾತ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಲೋಪದಿಂದಾಗಿ 3 ತಿಂಗಳ ಕಂದಮ್ಮನ ಆರೋಗ್ಯ ಪರಿಸ್ಥಿತಿ ಗಂಭೀರಗೊಂಡಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಭೇಟಿ ನೀಡಿದ್ದು, ವಿವಾದ ಮಹತ್ವದ ತಿರುವು ಪಡೆದುಕೊಂಡಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರು ನೇರವಾಗಿ ಆಸ್ಪತ್ರೆಗೆ ಆಗಮಿಸಿ, ಮಗುವಿನ ಪೋಷಕರಿಗೆ ಧೈರ್ಯ ತುಂಬಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಇದರ ಬೆನ್ನಲ್ಲೇ ಮೌನ ಮುರಿದ ಆಸ್ಪತ್ರೆ ವೈದ್ಯರ ತಂಡ, “ಮಗುವಿಗೆ ಉಚಿತ ಚಿಕಿತ್ಸೆ ನೀಡಲಿದ್ದು, ಯಾವುದೇ ಬಿಲ್ ವಸೂಲಿ ಮಾಡುವುದಿಲ್ಲ” ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, “ಕಳೆದ ಮೂರು ತಿಂಗಳಿನಿಂದ ಮಗು ನರಳುತ್ತಿರುವುದು ನೋವಿನ ಸಂಗತಿ. ಪೋಷಕರ ಆಕ್ರೋಶ ಮತ್ತು ದುಃಖ ಕಂಡರೆ ಕಣ್ಣೀರು ಬರುತ್ತದೆ. ಈ ಹಂತದಲ್ಲಿ ಯಾರನ್ನೂ ದೂಷಿಸುವ ಸಮಯ ಇದಲ್ಲ, ಮಗು ಸಂಪೂರ್ಣ ಗುಣಮುಖವಾಗಿ ಮುಂಚಿನಂತೆ ಆಟವಾಡುವಂತಾಗಬೇಕು.”

“ಹೊರಗಿನ ತಜ್ಞ ವೈದ್ಯರೊಂದಿಗೂ ಮಾತುಕತೆ ನಡೆಸಿದ್ದು, ಮಗುವಿನ ಪ್ರಾಣಕ್ಕೆ ಅಪಾಯವಿಲ್ಲ ಎಂದು ಖಾತರಿಯಾಗಿದೆ. ಚಿಕಿತ್ಸೆಗೆ ಎಷ್ಟೇ ಖರ್ಚಾಗಲಿ, ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ. ಅಗತ್ಯವಿದ್ದರೆ ಹೊರಗಿನಿಂದ ಉನ್ನತ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ನೀಡಲು ಸೂಚಿಸಿದ್ದೇನೆ. ಮಗುವಿಗೆ ಪ್ರತ್ಯೇಕ ವಿಶೇಷ ಕೊಠಡಿ ನೀಡಲು ಆಸ್ಪತ್ರೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದು, ಅವರು ಒಪ್ಪಿಕೊಂಡಿದ್ದಾರೆ” ಎಂದರು.

“ಸರ್ಕಾರದ್ದು ತಪ್ಪು ವರದಿ, ನಾವು ಬಿಲ್ ರೈಸ್ ಮಾಡಲ್ಲ!”: ವೈದ್ಯರ ಸ್ಪಷ್ಟನೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯರ ತಂಡ ಕಠಿಣ ಪ್ರತ್ಯುತ್ತರ ಹಾಗೂ ಸ್ಪಷ್ಟನೆಗಳನ್ನು ನೀಡಿದೆ. “ಯಾವುದೇ ವೈದ್ಯರಿಗೂ ಮಗುವಿಗೆ ಈ ರೀತಿ ಮಾಡಬೇಕು ಎಂಬ ಉದ್ದೇಶವಿರುವುದಿಲ್ಲ. ಮಗು ಹಾಲು ಕುಡಿದು ಬಂದಿದ್ದ ಕಾರಣ, ಆಕ್ಸಿಜನ್ ವ್ಯತ್ಯಾಸದಿಂದ ಮೆದುಳಿಗೆ ಹಾನಿಯಾಗಿದೆ. ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಕೆ ನಿಧಾನವಾಗಿದೆ. ಅನಸ್ತೇಷಿಯಾ ನೀಡಿದ ವೈದ್ಯರು 14 ವರ್ಷಗಳ ಅನುಭವ ಹೊಂದಿರುವ ಎಕ್ಸ್ಪರ್ಟ್ ಆಗಿದ್ದಾರೆ ಎಂದು ಫನಾ (PHANA) ಮತ್ತು ಮೆಡಿಕಲ್ ಅಸೋಸಿಯೇಷನ್ ಪರಿಶೀಲಿಸಿ ದೃಢಪಡಿಸಿದೆ. ಆದರೆ ಸರ್ಕಾರ ಈ ವಿಷಯದಲ್ಲಿ ತಪ್ಪು ವರದಿ ನೀಡಿದೆ. ಸದ್ಯಕ್ಕೆ ನಾವು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯುವುದಿಲ್ಲ. ನಾವು ಇದುವರೆಗೆ ಪೋಷಕರಿಂದ ಯಾವುದೇ ಹಣ ಕೇಳಿಲ್ಲ, ಬಿಲ್ ರೈಸ್ ಮಾಡಿಲ್ಲ ಮತ್ತು ಮುಂದೆ ಕೇಳುವುದೂ ಇಲ್ಲ. ಮಗು ಎಷ್ಟು ದಿನ ಆಸ್ಪತ್ರೆಯಲ್ಲಿ ಇರಬೇಕೋ ಅಷ್ಟು ದಿನ ಸಂಪೂರ್ಣ ಉಚಿತವಾಗಿ ಆರೈಕೆ ಮಾಡುತ್ತೇವೆ” ಎಂದು ವೈದ್ಯರು ಹೇಳಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


