“ದೇವರ ಮೇಲೆ ನಂಬಿಕೆ ಇದೆಯಾ?” ಎಂದು ಕೇಳಿ 15 ಸುತ್ತು ಗುಂಡು ಹಾರಿಸಿ ಟೆಕ್ ಮಹೀಂದ್ರಾ ಮಾಜಿ ಉಪಾಧ್ಯಕ್ಷ ಪರಂಜೀತ್ ಧಂಕರ್ ಹತ್ಯೆ

ಫರಿದಾಬಾದ್: ಹರಿಯಾಣದ ಫರಿದಾಬಾದ್‌ನ ಸೆಕ್ಟರ್ 21C ಪ್ರದೇಶದಲ್ಲಿ ದೀಪಾವಳಿಗೂ ಎರಡು ದಿನ ಮುನ್ನ (ನವೆಂಬರ್ 5, ಧನತ್ರಯೋದಶಿ ಸಂಜೆ) ನಡೆದಿದ್ದ ಟೆಕ್ ಮಹೀಂದ್ರಾ (Tech Mahindra) ಕಂಪನಿಯ ಮಾಜಿ ಹಿರಿಯ ಉಪಾಧ್ಯಕ್ಷ ಪರಂಜೀತ್ ಧಂಕರ್ (Paramjit Dhankhar) ಅವರ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಸಿಸಿಟಿವಿ ದೃಶ್ಯಾವಳಿಗಳು (CCTV Footage) ಈಗ ಹೊರಬಿದ್ದಿವೆ.

ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಆರೋಪಿ ಮೋಹನ್ ಅಲಿಯಾಸ್ ಮೋನು ಶರ್ಮಾ (Monu Sharma), ಪಾರ್ಕಿಂಗ್ ವಿಚಾರ ಮಾತನಾಡುವ ನೆಪದಲ್ಲಿ ಮೊದಲ ಮಹಡಿಯಲ್ಲಿದ್ದ ಧಂಕರ್ ಅವರನ್ನು ಕೆಳಗೆ ಕರೆಸಿ, ಪರವಾನಗಿ ಪಡೆದ ಪಿಸ್ತೂಲ್‌ನಿಂದ 15 ರಿಂದ 16 ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Advertisement

“ದೇವರ ಮೇಲೆ ನಂಬಿಕೆ ಇದೆಯಾ?”: ಗುಂಡು ಹಾರಿಸುವ ಮುನ್ನ ನಡೆದಿದ್ದೇನು?

ಬಯಲಾಗಿರುವ ಮೊದಲ ಸಿಸಿಟಿವಿ ವಿಡಿಯೋದಲ್ಲಿ ಹತ್ಯೆಗೂ ಮುನ್ನ ಇಬ್ಬರ ನಡುವೆ ನಡೆದ ಸಂಭಾಷಣೆ ಮತ್ತು ಘರ್ಷಣೆಯ ದೃಶ್ಯಗಳಿವೆ. ಧಂಕರ್ ತಮ್ಮ ಮಗನೊಂದಿಗೆ ಪಾರ್ಕಿಂಗ್ ಪ್ರದೇಶಕ್ಕೆ ಬಂದಾಗ ಹತ್ತಿರ ಬಂದ ಆರೋಪಿ ಶರ್ಮಾ, “ವಿಧವೆ ಎಂದರೇನು ಎಂದು ನಿನಗೆ ಗೊತ್ತಾ? ಅದರಲ್ಲಿ ನಿನಗೆ ನಂಬಿಕೆ ಇದೆಯಾ?” ಎಂದು ಎರಡು ಬಾರಿ ಪ್ರಶ್ನಿಸಿದ್ದಾನೆ. ಆರೋಪಿಯ ಮಾತಿನಿಂದ ಗೊಂದಲಕ್ಕೊಳಗಾದ ಧಂಕರ್ ಏನಾಯಿತು ಎಂದು ಕೇಳಿದ್ದಾರೆ. ಆಗ ಶರ್ಮಾ, “ನನಗೆ ಹೊಡೆಯಲು ನೀನು ಮೂವರು ಜನರನ್ನು ಕಳುಹಿಸಿದ್ದೀಯಾ” ಎಂದು ಆರೋಪಿಸಿದ್ದಾನೆ. ಇದಕ್ಕೆ ಧಂಕರ್ ಕೈಜೋಡಿಸಿ, “ನಾನು ಯಾರನ್ನೂ ಕಳುಹಿಸಿಲ್ಲ, ನಿಜವಾಗಿಯೂ ಏನಾಗಿದೆ ಹೇಳು” ಎಂದು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ.

Advertisement

ಇಲ್ಲಿದೆ ನೋಡಿ ವಿಡಿಯೋ:

ಶರ್ಮಾ ಮಾತನಾಡಲು ನಿರಾಕರಿಸಿದಾಗ, ಧಂಕರ್ ತಮ್ಮ ಮಗನನ್ನು ಮಧ್ಯಪ್ರವೇಶಿಸದಂತೆ ತಡೆದಿದ್ದಾರೆ. ಈ ವೇಳೆ ಆರೋಪಿ ಶರ್ಮಾ ಧಂಕರ್ ಪುತ್ರನಿಗೆ ಮುಂದೆ ಬರುವಂತೆ ಸನ್ನೆ ಮಾಡಿ, ಬಳಿಕ ಧಂಕರ್ ಅವರನ್ನು ನೋಡಿ “ನಿನಗೆ ದೇವರ ಮೇಲೆ ನಂಬಿಕೆ ಇದೆಯಾ?” ಎಂದು ಪ್ರಶ್ನಿಸಿದ್ದಾನೆ. ತಕ್ಷಣವೇ ಜೇಬಿನಿಂದ ಪಿಸ್ತೂಲ್ ಹೊರತೆಗೆದು ಗುಂಡಿನ ಮಳೆಗರೆದಿದ್ದು, ಧಂಕರ್ ಪುತ್ರ ಪ್ರಾಣಭಯದಿಂದ ಸ್ಥಳದಿಂದ ಓಡಿಹೋಗಿರುವುದು ದೃಶ್ಯದಲ್ಲಿದೆ.

ಇದನ್ನೂ ಓದಿ: ಕಡಬದಲ್ಲಿ 5 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಹಾರಾಷ್ಟ್ರ ಮೂಲದ ಕುಖ್ಯಾತ ಕಳ್ಳ ಕೋರ್ಟ್‌ಗೆ ಶರಣು

ಮುಖ್ಯ ದ್ವಾರದ ಬಳಿಯೂ ಮುಂದುವರಿದ ಗುಂಡಿನ ದಾಳಿ: ಆರೋಪಿ ಅರೆಸ್ಟ್

ಮತ್ತೊಂದು ಸಿಸಿಟಿವಿ ಕ್ಲಿಪ್‌ನಲ್ಲಿ, ಗುಂಡೇಟು ತಿಂದ ಧಂಕರ್ ಸಹಾಯಕ್ಕಾಗಿ ಕಟ್ಟಡದ ಮುಖ್ಯ ದ್ವಾರದ (Main Gate) ಬಳಿ ತಲುಪಿರುವುದು ಕಂಡುಬಂದಿದೆ. ಹಿಂಬದಿಯಿಂದ ಮತ್ತೆ ಬಂದ ಆರೋಪಿ ಶರ್ಮಾನ ಕಾಲರ್ ಹಿಡಿದ ಧಂಕರ್, ಆತನನ್ನು ನೆಲಕ್ಕೆ ಕೆಡವಿ ಪ್ರತಿರೋಧ ಒಡ್ಡಿದ್ದಾರೆ. ಆದರೂ ಆರೋಪಿ ಮತ್ತೆ ಗುಂಡು ಹಾರಿಸಿದ್ದು, ಧಂಕರ್ ದೇಹಕ್ಕೆ 8 ರಿಂದ 9 ಗುಂಡುಗಳು ತಗುಲಿ ಅವರು ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಕುಟುಂಬ ಸಮೇತ ಪರಾರಿಯಾಗಿದ್ದ ಆರೋಪಿ ಮೋನು ಶರ್ಮಾನನ್ನು ಫರಿದಾಬಾದ್ ಕ್ರೈಂ ಬ್ರಾಂಚ್ (Crime Branch) ಪೊಲೀಸರು ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ