ಬಂಟ್ವಾಳ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪಿಂಚಣಿ ಸೌಲಭ್ಯಗಳ ಸ್ಥಗಿತ ಹಾಗೂ ಆಶ್ರಯ ಯೋಜನೆಯಡಿ ಮನೆಗಳ ಮಂಜೂರಾತಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಜನಾಂದೋಲನದ ಭಾಗವಾಗಿ ಮಂಚಿ ಶಕ್ತಿಕೇಂದ್ರದ ವತಿಯಿಂದ ನ.12ರಂದು ಪ್ರತಿಭಟನೆ ನಡೆಯಿತು.
ಮಂಚಿ ಗ್ರಾಮದ ಕುಕ್ಕಾಜೆಯಿಂದ ಆರಂಭಗೊಂಡ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ ಮಂಚಿ ಗ್ರಾಮ ಪಂಚಾಯತ್ ವಠಾರದಲ್ಲಿ ಸಮಾಪನಗೊಂಡಿತು. ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಬಂಟ್ವಾಳ ಬಿಜೆಪಿ ಮುಖಂಡ ರಾಮದಾಸ್ ಬಂಟ್ವಾಳ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ತೀವ್ರವಾಗಿ ಖಂಡಿಸಿದರು.

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಜೀವನ ನಿರ್ವಹಣೆ ಮಾಡಲು ಪರದಾಡುವಂತಾಗಿದೆ. ಹಲವು ಪಿಂಚಣಿ ಫಲಾನುಭವಿಗಳಿಗೆ ಸೌಲಭ್ಯಗಳು ದೊರೆಯುತ್ತಿಲ್ಲ. ಬಡವರಿಗೆ ಮನೆ ನಿರ್ಮಿಸಿಕೊಳ್ಳಲು ನೆರವಾಗಬೇಕಾದ ಆಶ್ರಯ ಯೋಜನೆಯೂ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಅವರು ಆರೋಪಿಸಿದರು. ಜನಸಾಮಾನ್ಯರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕರೋಪಾಡಿ ಪ್ರಸ್ತಾವನೆಗೈದರು. ರಮೇಶ್ ರಾವ್ ಮಂಚಿ ಸ್ವಾಗತಿಸಿದರು.
ಬಿಜೆಪಿ ಮಂಡಲ ಕಾರ್ಯದರ್ಶಿ ವಿಜಯ ನಾಯಕ್, ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕೇಶವ ರಾವ್, ಪ್ರಧಾನ ಕಾರ್ಯದರ್ಶಿ ಶಶಿಧರ್ ರೈ, ಮಂಚಿ ಶಕ್ತಿಕೇಂದ್ರದ ಅಧ್ಯಕ್ಷ ಮೋಹನದಾಸ್ ಶೆಟ್ಟಿ, ಪ್ರಭಾರಿ ಹರಿಪ್ರಸಾದ್ ಭಂಡಾರಿಬೆಟ್ಟು, ಮಂಡಲ ಒಬಿಸಿ ಮೋರ್ಚಾದ ಜಯಕಿಶೋರ್, ಕೊಳ್ನಾಡು ಮಹಾಶಕ್ತಿ ಕೇಂದ್ರದ ಯುವ ಮೋರ್ಚಾ ಅಧ್ಯಕ್ಷ ರಾಜೇಶ್ ಕುಕ್ಕಾಜೆ, ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪ ಕಾಮತ್, ಪ್ರಮೀಳಾ ಕಿಶೋರ್, ಪಂಚಾಯತ್ ಸದಸ್ಯರು, ಸಹಕಾರಿ ಸಂಘದ ನಿರ್ದೇಶಕರು, ಬೂತ್ ಅಧ್ಯಕ್ಷರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


