ಸುಳ್ಯದ ಬಾಳುಗೋಡು ಗ್ರಾಮದ ಪದಕ ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದ ಶಾಸಕರು

ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾಳುಗೋಡು ಗ್ರಾಮದ ಪದಕ ಎಂಬಲ್ಲಿ ಅಂದಾಜು ₹1.75 ಕೋಟಿ (175.00 ಲಕ್ಷ ರೂ.) ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಸೇತುವೆ ಕಾಮಗಾರಿಗೆ ಕ್ಷೇತ್ರದ ಶಾಸಕಿ ಭಾಗೀರತಿ ಮುರುಳ್ಯ ಇಂದು ವಿಧ್ಯುಕ್ತವಾಗಿ ಗುದ್ದಲಿಪೂಜೆ ನೆರವೇರಿಸಿದರು. ಸುಳ್ಯ ತಾಲೂಕಿನ ನಡುಗಲ್ಲು–ಹರಿಹರ ಪಲ್ಲತ್ತಡ್ಕ–ಬಾಳುಗೋಡು ಜಿಲ್ಲಾ ಮುಖ್ಯ ರಸ್ತೆಯ (MDR) ಕಿ.ಮೀ. 10.75ರಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದ್ದು, ಸ್ಥಳೀಯರ ಬಹುದಿನಗಳ ಬೇಡಿಕೆಗೆ ಇದೀಗ ಅಧಿಕೃತ ಚಾಲನೆ ದೊರೆತಿದೆ.

₹5 ಕೋಟಿ ವಿಶೇಷ ಅನುದಾನದಲ್ಲಿ 5 ಸೇತುವೆಗಳ ಪುನರ್ ನಿರ್ಮಾಣ:

ಸುಳ್ಯ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಲೋಕೋಪಯೋಗಿ ಇಲಾಖೆಯ (PWD) ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಆದ್ಯತೆಯ ಮೇರೆಗೆ ಸೇತುವೆಗಳ ಪುನರ್ ನಿರ್ಮಾಣ ಕೈಗೊಳ್ಳಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (KRDCL) ಯೋಜನೆಯಡಿ (ಲೆಕ್ಕ ಶೀರ್ಷಿಕೆ: 5054-80-190-0-01-132) ಅನುದಾನ ಒದಗಿಸುವಂತೆ ಶಾಸಕರು ಮಾರ್ಚ್ 21, 2026ರಂದು ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಸಿದ್ದರು.

Advertisement

ಶಾಸಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಚಿವರು, 5 ಸೇತುವೆಗಳ ನಿರ್ಮಾಣಕ್ಕಾಗಿ ಮೇ 20, 2026ರಂದು ₹5 ಕೋಟಿ ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದರು. ಅದರಂತೆ ಬಾಳುಗೋಡು ಗ್ರಾಮದ ಪದಕ ಸೇತುವೆ ನಿರ್ಮಾಣಕ್ಕೆ ₹175.00 ಲಕ್ಷ ಮೀಸಲಿರಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದೆ.

ಇದನ್ನೂ ಓದಿ: ಸುಳ್ಯ-ಕಡಬ ತಾಲೂಕುಗಳ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನ ನೀಡುವಂತೆ ಸಚಿವ ಸತೀಶ್ ಜಾರಕಿಹೊಳಿ ಅವರಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಮನವಿ

Advertisement

ಹಳೆಯ ಸೇತುವೆಗೆ ಹಾಲು ಹೊಯ್ದು ಭಾವನಾತ್ಮಕ ವಿದಾಯ:

ಹೊಸ ಸೇತುವೆ ನಿರ್ಮಾಣದ ಗುದ್ದಲಿಪೂಜೆಯ ಸಂದರ್ಭದಲ್ಲಿ ಪದಕ ಸೇತುವೆಯ ಫಲಾನುಭವಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು, ಇಷ್ಟು ವರ್ಷಗಳ ಕಾಲ ತಮಗೆ ಸಂಪರ್ಕ ಕಲ್ಪಿಸಿದ್ದ ಹಳೆಯ ಸೇತುವೆಗೆ ಹಾಲು ಹೊಯ್ಯುವ ಮೂಲಕ ಭಾವನಾತ್ಮಕವಾಗಿ ವಿದಾಯ ಹೇಳಿ ನೂತನ ಕಾಮಗಾರಿಗೆ ಅನುವು ಮಾಡಿಕೊಟ್ಟರು.  ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಎ.ವಿ. ತೀರ್ಥರಾಮ, ಕೃಷ್ಣಯ್ಯ ಮೂಲೆತೋಟ, ವಿನಯ್ ಮುಳುಗಾಡು, ಚಂದ್ರಹಾಸ ಶಿವಾಲ, ಹಿಮ್ಮತ್ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಗೂ ಮಾತೆಯರು ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Advertisement