ಮಂಗಳೂರು: ರಸ್ತೆ ಅಪಘಾತಗಳು ಅಥವಾ ಆರೋಗ್ಯ ತುರ್ತು ಸಂದರ್ಭಗಳಲ್ಲಿ ಜೀವ ಉಳಿಸಲು ಧಾವಿಸುವ ಆಂಬ್ಯುಲೆನ್ಸ್‌ಗಳು ಎಲ್ಲರಿಗೂ ಪರಿಚಿತ. ಆದರೆ ಸಮುದ್ರದ ಮಧ್ಯೆ ಅಪಘಾತಗಳು ನಡೆದಾಗ, ಗಾಯಾಳುಗಳನ್ನು ತಕ್ಷಣ ಕರಾವಳಿಗೆ ತಲುಪಿಸುವ ಸೌಲಭ್ಯಗಳ ಕೊರತೆಯಿಂದ ಅನೇಕ ಬಾರಿ ಅಮೂಲ್ಯ ಜೀವಗಳು ಕಳೆದುಹೋಗುತ್ತಿವೆ. ದಶಕಗಳಿಂದಲೂ ಇರುವ ಸಮಸ್ಯೆಗೆ ಪರಿಹಾರವಾಗಿ ಮಂಗಳೂರಿನ ಉಳ್ಳಾಲದ ಮೀನುಗಾರರು ರಾಜ್ಯದಲ್ಲೇ ಮೊದಲ ಬಾರಿಗೆ ‘ಬೋಟ್ ಆಂಬ್ಯುಲೆನ್ಸ್’ ಸೇವೆ ಆರಂಭಿಸಿದ್ದಾರೆ.
ಈ ತುರ್ತು ಸೇವೆಯನ್ನು ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್‌ನೆಟ್ ಮೀನುಗಾರರ ಸಂಘ ಪ್ರಾರಂಭಿಸಿದ್ದು, ಸಮುದ್ರದಲ್ಲಿ ದೋಣಿ ಮುಳುಗು, ಬೆಂಕಿ ಅವಘಡಗಳು ಅಥವಾ ಮೀನುಗಾರರಿಗೆ ಆಗುವ ಅಕಸ್ಮಿಕ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ತಕ್ಷಣ ಪ್ರಥಮ ಚಿಕಿತ್ಸೆ ನೀಡಿ ಗಾಯಾಳುಗಳನ್ನು ವೇಗವಾಗಿ ದಡಕ್ಕೆ ಕರೆತರುವುದೇ ಇದರ ಉದ್ದೇಶವಾಗಿದೆ.

ಕರಾವಳಿ ಪ್ರದೇಶದಲ್ಲಿ ದಶಕಗಳಿಂದ ಸಮುದ್ರ ಆಂಬ್ಯುಲೆನ್ಸ್ ಬೇಡಿಕೆ ಇದ್ದರೂ ತಾಂತ್ರಿಕ ಮತ್ತು ಆರ್ಥಿಕ ಅಡಚಣೆಗಳಿಂದ ಸರ್ಕಾರಿ ಯೋಜನೆಗಳು ಸಾಕಾರಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ, ಸರ್ಕಾರದ ನೆರವಿಗಾಗಿ ಕಾಯದೆ ಮೀನುಗಾರರೇ ಮುಂದೆ ಬಂದು ಈ ಸೇವೆಯನ್ನು ಆರಂಭಿಸಿರುವುದು ವಿಶೇಷ.
ಇದನ್ನೂ ಓದಿ: Udupi : ಕೋಡಿಬೆಂಗ್ರೆ ಕಡಲತೀರದ ಬಳಿ ಪ್ರವಾಸಿಗರ ದೋಣಿ ಪಲ್ಟಿ : ಹಲವರಿಗೆ ಗಾಯ
ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಬೋಟ್ ಆಂಬ್ಯುಲೆನ್ಸ್‌ನಲ್ಲಿ ಸೈರನ್, ಕೆಂಪು ಎಚ್ಚರಿಕೆ ದೀಪಗಳು, ಸ್ಟ್ರೆಚರ್, ಆಮ್ಲಜನಕ ಸಿಲಿಂಡರ್, ಪ್ರಥಮ ಚಿಕಿತ್ಸಾ ಕಿಟ್ ಹಾಗೂ ಲೈಫ್ ಜಾಕೆಟ್‌ಗಳನ್ನು ಅಳವಡಿಸಲಾಗಿದೆ. ಸೈರನ್ ಕೇಳುತ್ತಿದ್ದಂತೆ ಇತರೆ ದೋಣಿಗಳು ದಾರಿ ಬಿಡುವಂತೆ ವ್ಯವಸ್ಥೆ ಮಾಡಲಾಗಿದೆ. ಕರಾವಳಿಯಲ್ಲಿರುವವರೊಂದಿಗೆ ಸಂಪರ್ಕ ಸಾಧಿಸಲು ಪಬ್ಲಿಕ್ ಅಡ್ರೆಸ್ ಸಿಸ್ಟಂ ಕೂಡ ಅಳವಡಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಇದು ಬಹಳ ಸಹಕಾರಿಯಾಗಿದೆ.
ಈ ಸೇವೆಯನ್ನು ನಿರ್ವಹಿಸಲು ಮೂರು ಮಂದಿ ತರಬೇತಿ ಪಡೆದ ಸಿಬ್ಬಂದಿಯನ್ನು ನೇಮಿಸಲಾಗಿದ್ದು, ಕಠಿಣ ಸಮುದ್ರ ಪರಿಸ್ಥಿತಿಗಳಲ್ಲಿಯೂ ಈಜುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ದೋಣಿ ಅಪಘಾತದ ಸಂದರ್ಭಗಳಲ್ಲಿ ಉಸಿರಾಟದ ತೊಂದರೆಯಿಂದಾಗುವ ಸಾವುಗಳನ್ನು ತಡೆಯುವುದೂ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಪ್ರಸ್ತುತ ಒಂದೇ ಬೋಟ್ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರದಿಂದ ಆರ್ಥಿಕ ನೆರವು ದೊರೆತರೆ
ಹೆಚ್ಚುವರಿ ವೈದ್ಯಕೀಯ ಸೌಲಭ್ಯಗಳೊಂದಿಗೆ ಈ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಮೀನುಗಾರರ ಸಂಘ ಹೊಂದಿದೆ. ಕರಾವಳಿ ಪ್ರದೇಶದಲ್ಲಿ ಜೀವ ರಕ್ಷಣೆಗೆ ಮಾದರಿಯಾದ ಈ ಮುಂದಾಳತ್ವ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

