ಪುತ್ತೂರು: ಕರಾವಳಿಯ ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡದ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಭಾರಿ ಶಬ್ದದೊಂದಿಗೆ ಜೆಟ್ ವಿಮಾನಗಳು ಅತಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿವೆ. ಏಕಾಏಕಿ ಕೇಳಿಬಂದ ಕರ್ಕಶ ಶಬ್ದಕ್ಕೆ ಜನರು ಮನೆಗಳಿಂದ ಹೊರಬಂದು ಆಕಾಶದತ್ತ ಮುಖ ಮಾಡಿದ್ದರು. ಸುಮಾರು ಮಧ್ಯಾಹ್ನ 1:30 ರಿಂದ 2:30ರ ಅವಧಿಯಲ್ಲಿ ಪುತ್ತೂರು ಪೇಟೆ, ಪಾಣಾಜೆ, ಕೆದಂಬಾಡಿ ಮತ್ತು ವಿಟ್ಲ ಭಾಗಗಳಲ್ಲಿ ಎರಡು ಯುದ್ಧ ವಿಮಾನಗಳು ಹಾರಾಡಿವೆ. ಹವಾಮಾನ ಸ್ವಚ್ಛವಾಗಿದ್ದರಿಂದ ವಿಮಾನದ ಹಾರಾಟ ಸ್ಪಷ್ಟವಾಗಿ ಗೋಚರಿಸಿದೆ.
ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (Geological Survey of India – GSI) ಸಂಸ್ಥೆಯ ಸಮೀಕ್ಷಾ ಕಾರ್ಯಕ್ಕಾಗಿ ಈ ವಿಮಾನ ಹಾರಾಟ ನಡೆಸಿದೆ. ಗಣಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಈ ಪ್ರಮುಖ ಭೂ ವಿಜ್ಞಾನ ಸಂಸ್ಥೆ ಕೈಗಾರಿಕಾ ಅಭಿವೃದ್ಧಿ, ಮೂಲಸೌಕರ್ಯ ಯೋಜನೆಗಳು ಮತ್ತು ಪರಿಸರ ಸುಸ್ಥಿರತೆಗೆ ಅಗತ್ಯವಾದ ಮೂಲಭೂತ ಭೂವೈಜ್ಞಾನಿಕ ಮಾಹಿತಿ ಸಂಗ್ರಹಣೆ, ನಕ್ಷೆ ನಿರ್ಮಾಣ ಹಾಗೂ ಖನಿಜ ಸಂಪನ್ಮೂಲ ಮೌಲ್ಯಮಾಪನ ಕಾರ್ಯಗಳನ್ನು ಕೈಗೊಳ್ಳುತ್ತದೆ.

ಇದನ್ನೂ ಓದಿ: ಭಾರತ ಸನಾತನವೂ, ನಿತ್ಯನೂತನವೂ ಆಗಿದೆ: ಡಾ.ಪ್ರಭಾಕರ್ ಭಟ್ ಕಲ್ಲಡ್ಕ
ಇಲ್ಲಿದೆ ನೋಡಿ ವಿಡಿಯೋ:
ಭೂಗರ್ಭದ ರಚನೆ, ಖನಿಜ ಸಂಪತ್ತು ಮತ್ತು ಭೂವೈಜ್ಞಾನಿಕ ಲಕ್ಷಣಗಳ ಅಧ್ಯಯನಕ್ಕಾಗಿ ವಿಶೇಷ ಸಾಧನಗಳೊಂದಿಗೆ ಸಮೀಕ್ಷಾ ಹಾರಾಟ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಮಾನವು ನಗರ ಭಾಗದ ಮೇಲೆ ಹಲವು ಬಾರಿ ಸುತ್ತು ಹಾಕಿದ ಕಾರಣ, ಸ್ಥಳೀಯರು ಮನೆಗಳ ಹೊರಗೆ ಬಂದು ಕುತೂಹಲದಿಂದ ಆಕಾಶದತ್ತ ಗಮನ ಹರಿಸಿದರು.
ಈ ಹಾರಾಟ ನಿಯಮಿತ ಸಮೀಕ್ಷಾ ಕಾರ್ಯಾಚರಣೆಯ ಭಾಗವಾಗಿದ್ದು, ಸಾರ್ವಜನಿಕರು ಆತಂಕಪಡಬೇಕಾದ ಅಗತ್ಯವಿಲ್ಲ ಎಂದು ಸಂಬಂಧಿತ ಮೂಲಗಳು ಸ್ಪಷ್ಟಪಡಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

