ಮಂಗಳೂರು: ಸರಕಾರ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಮರುಪ್ರಾರಂಭಿಸಲು ಮುಂದಾಗುತ್ತಿದ್ದಂತೆಯೇ, ವಿದ್ಯಾರ್ಥಿ ಸಂಘಟನೆಗಳ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ NSUI ಮತ್ತು ABVP ಕಾರ್ಯಕರ್ತರ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ. ಬಜೆಟ್ ನಿರ್ಧಾರವನ್ನು ಸ್ವಾಗತಿಸಿದ NSUI ಕಾರ್ಯಕರ್ತರು ಕಾಲೇಜು ಕ್ಯಾಂಪಸ್ ಒಳಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಷ್ಟೇ ಅಲ್ಲದೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪರ ಘೋಷಣೆಗಳನ್ನು ಕೂಗಿದ್ದು ವಿವಾದಕ್ಕೆ ಕಾರಣವಾಯಿತು.
ಶೈಕ್ಷಣಿಕ ಕೇಂದ್ರದಲ್ಲಿ ರಾಜಕೀಯ ಘೋಷಣೆಗಳನ್ನು ಕೂಗಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಎಬಿವಿಪಿ ವಿದ್ಯಾರ್ಥಿಗಳು, ಕಾಲೇಜಿನ ಮುಂಭಾಗ ಪ್ರತಿಭಟನೆ ನಡೆಸಿದರು. ಕಾಲೇಜನ್ನು ರಾಜಕೀಯ ಅಖಾಡ ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರಾಂಶುಪಾಲರ ವಿರುದ್ಧವೂ ಧಿಕ್ಕಾರ ಕೂಗಿದರು. “ಸಿಹಿ ಹಂಚಲು ಮಾತ್ರ ಅನುಮತಿ ನೀಡಲಾಗಿತ್ತು, ಘೋಷಣೆ ಕೂಗಿದ್ದು ಗಮನಕ್ಕೆ ಬಂದಿಲ್ಲ” ಎಂದು ಪ್ರಾಂಶುಪಾಲ ಗಣಪತಿ ಗೌಡ ಅವರು ನೀಡಿದ ಹೇಳಿಕೆ ವಿದ್ಯಾರ್ಥಿಗಳ ವಾಗ್ವಾದಕ್ಕೆ ಕಾರಣವಾಯಿತು.

ಇದನ್ನೂ ಓದಿ: ಬೆಂಗಳೂರು: ರಿಯಲ್ ಎಸ್ಟೇಟ್ ಏಜೆಂಟ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮೃತನ ಸಂಬಂಧಿಯೇ ಹಂತಕ!
ಚುನಾವಣೆ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಪೋಷಕರಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಶಿಕ್ಷಣದ ದೇಗುಲವಾಗಬೇಕಿದ್ದ ಕ್ಯಾಂಪಸ್‌ಗಳು ರಾಜಕೀಯ ಜಿದ್ದಾಜಿದ್ದಿಗೆ ಬಲಿಯಾಗುತ್ತಿವೆ ಎಂಬ ಆಕ್ರೋಶ ಕೇಳಿಬರುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

