ಮಡ್ಯಾರಬೆಟ್ಟಿನಲ್ಲಿ ನೀರು ಪಾಲಾದ ಸೇತುವೆಗೆ ಬದಲಾಗಿ ಹೊಸ ಸೇತುವೆ: ವೆಂಕಟರಮಣ ಆಜೇರು ಶ್ರಮಕ್ಕೆ ಸಾರ್ವಜನಿಕರ ಮೆಚ್ಚುಗೆ

Puttur News Punacha Kallaje madyarabettu-new-bridge-venkataramana-ajeru-efforts-public-appreciation

ಪುತ್ತೂರು: ಆಜೇರು ಮಂದಿರದಿಂದ ಮಡ್ಯಾರಬೆಟ್ಟು–ಕಲ್ಲಾಜೆ ಸಂಪರ್ಕಿಸುವ ಪಂಚಾಯತ್ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಕಿರು ಸೇತುವೆ ಕಳಪೆ ಕಾಮಗಾರಿಯಿಂದ ಮಳೆಗೆ ನೀರುಪಾಲಾದ ಘಟನೆಗೆ ಹಲವು ವರ್ಷಗಳಾದರೂ ಹೊಸ ಸೇತುವೆ ನಿರ್ಮಾಣದ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಾಗಿರಲಿಲ್ಲ. ಇದೀಗ ಹೊಸ ಸೇತುವೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಇದರ ಹಿಂದೆ ಸಾಮಾಜಿಕ ಕಾರ್ಯಕರ್ತ ವೆಂಕಟರಮಣ ಆಜೇರು ಅವರ ನಿರಂತರ ಪ್ರಯತ್ನವೇ ಕಾರಣವೆಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಡ್ಯಾರಬೆಟ್ಟಿನ ಈ ಕಿರು ಸೇತುವೆ ಮಳೆಗೆ ಕೊಚ್ಚಿ ಹೋಗಿ ವರ್ಷಗಳೇ ಕಳೆದರೂ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಆಡಳಿತ ಹೊಸ ಸೇತುವೆ ನಿರ್ಮಾಣದತ್ತ ಗಮನ ಹರಿಸಿರಲಿಲ್ಲ. ಇದರಿಂದಾಗಿ ಸ್ಥಳೀಯರು ತಾತ್ಕಾಲಿಕವಾಗಿ ಕಾಲು ಸಂಕವನ್ನು ನಿರ್ಮಿಸಿಕೊಂಡು ಸಂಚಾರ ನಡೆಸುತ್ತಿದ್ದರು. ಆದರೆ ಕೆಲವು ದಿನಗಳಲ್ಲೇ ಅದನ್ನೂ ತೆರವುಗೊಳಿಸಲಾಗಿದ್ದು, ಪರಿಣಾಮವಾಗಿ ಗ್ರಾಮಸ್ಥರು ಮತ್ತೆ ಸಂಚಾರಕ್ಕೆ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

Advertisement

2022–23ನೇ ಸಾಲಿನಲ್ಲಿ ಸೇತುವೆ ನಿರ್ಮಾಣಕ್ಕೆ ಸುಮಾರು 15 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಆರಂಭವಾಗದೇ ಇದ್ದುದರಿಂದ ಗ್ರಾಮಸ್ಥರಲ್ಲಿ ಅಸಮಾಧಾನ ಮೂಡಿತ್ತು. ಈ ಹಿನ್ನೆಲೆ ಸಾಮಾಜಿಕ ಕಾರ್ಯಕರ್ತ ವೆಂಕಟರಮಣ ಆಜೇರು ಅವರು ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಕಾಂಗ್ರೆಸ್ ರಾಜಕೀಯ ಕಾರ್ಯಕ್ರಮ: ಬಿಜೆಪಿಯಿಂದ ದೂರು

ಅವರ ನಿರಂತರ ಒತ್ತಡ ಮತ್ತು ಪ್ರಯತ್ನದ ಫಲವಾಗಿ ಸೇತುವೆ ನಿರ್ಮಾಣ ಕಾಮಗಾರಿಗೆ ಅನುಮೋದನೆ ದೊರೆಯಿತು. ಬಳಿಕ ಕಾಮಗಾರಿ ಆರಂಭಗೊಂಡು ಇದೀಗ ಅಂತಿಮ ಹಂತ ತಲುಪಿದೆ. ವೆಂಕಟರಮಣ ಆಜೇರು ಅವರು ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸುತ್ತಾ ಬಂದಿದ್ದು, ಅವರ ಮುತುವರ್ಜಿ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ.

ಇದೇ ವೇಳೆ, ಸಾರ್ವಜನಿಕ ಕಾಮಗಾರಿಗಳಲ್ಲಿ ಕಳಪೆ ಕೆಲಸ ಕಂಡುಬಂದರೆ ಅದನ್ನು ಸಹಿಸದ ವೆಂಕಟರಮಣ ಅವರು ಯಾವುದೇ ಮುಲಾಜಿಲ್ಲದೆ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಕ್ರಮ ಕೈಗೊಳ್ಳುವಂತೆ ಮಾಡಿಸುತ್ತಿದ್ದಾರೆ. ಪುಣಚ–ಸಾರಡ್ಕ ರಸ್ತೆಯ ಮಲೆತಡ್ಕ ಪ್ರದೇಶದಲ್ಲಿ ನೀರಿನ ಪೈಪ್ ಅಳವಡಿಕೆ ಕಾಮಗಾರಿ ವೇಳೆ ನಿರ್ಮಿಸಲಾಗಿದ್ದ ಕಳಪೆ ತಡೆಗೋಡೆಯ ಕುರಿತು ಅವರು ಫೋಟೋ ಸಾಕ್ಷಿಯೊಂದಿಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು.

ಅದರ ಪರಿಣಾಮ ಅಧಿಕಾರಿಗಳು ಕಳಪೆ ತಡೆಗೋಡೆಯನ್ನು ತೆರವುಗೊಳಿಸಿ ಹೊಸದಾಗಿ ಗುಣಮಟ್ಟದ ತಡೆಗೋಡೆ ನಿರ್ಮಿಸಿದ್ದಾರೆ. ಇಂತಹ ಅನೇಕ ಕಾಮಗಾರಿಗಳಲ್ಲಿ ದೋಷಗಳನ್ನು ಬೆಳಕಿಗೆ ತಂದು ಸರಿಯಾದ ಕೆಲಸ ನಡೆಯುವಂತೆ ಮಾಡುತ್ತಿರುವ ವೆಂಕಟರಮಣ ಆಜೇರು ಅವರ ಸಾಮಾಜಿಕ ಕಾಳಜಿ ಮತ್ತು ಸೇವಾ ಮನೋಭಾವ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು