ಬೆಂಗಳೂರು: ರಾಜ್ಯದಲ್ಲಿ ಮರ್ಯಾದಾ ಹತ್ಯೆಗಳನ್ನು ತಡೆದು ಅಂತರ್ಜಾತಿ ವಿವಾಹ ಮಾಡಿಕೊಂಡ ದಂಪತಿಗಳಿಗೆ ಕಾನೂನುಬದ್ಧ ರಕ್ಷಣೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ‘ಇವ ನಮ್ಮವ ಇವ ನಮ್ಮವ’ ಎಂಬ ಹೆಸರಿನ ಹೊಸ ಮಸೂದೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದ್ದು, ಪ್ರಸ್ತುತ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಅದನ್ನು ಮಂಡಿಸಲು ನಿರ್ಧರಿಸಲಾಗಿದೆ.
ಈ ಮಸೂದೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಇಚ್ಛೆಯಂತೆ ವಿವಾಹವಾಗುವ ಸ್ವಾತಂತ್ರ್ಯವನ್ನು ಖಾತ್ರಿ ಪಡಿಸುವುದು, ಜಾತಿ ಆಧಾರಿತ ಅಪರಾಧಗಳನ್ನು ತಡೆಯುವುದು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಪ್ಪಿಸುವುದು ಪ್ರಮುಖ ಉದ್ದೇಶವಾಗಿದೆ. ಜೊತೆಗೆ ಅಂತರ್ಜಾತಿ ವಿವಾಹಗಳಿಗೆ ಸಹಾಯ ಮಾಡುವ ಉದ್ದೇಶದಿಂದ ‘ಇವ ನಮ್ಮವ ಇವ ನಮ್ಮವ ವೇದಿಕೆ’ ಎಂಬ ವ್ಯವಸ್ಥೆ ಸ್ಥಾಪಿಸುವ ಪ್ರಸ್ತಾವವೂ ಇದರಲ್ಲಿ ಒಳಗೊಂಡಿದೆ.

ಜಾತಿ ಆಧಾರಿತ ಹಿಂಸೆ ವಿರುದ್ಧ ಕಾನೂನು
ರಾಜ್ಯದಲ್ಲಿ ಇನ್ನೂ ಜಾತಿ ಆಧಾರಿತ ಭೇದಭಾವ ಗಂಭೀರ ಸಾಮಾಜಿಕ ಸಮಸ್ಯೆಯಾಗಿ ಮುಂದುವರಿದಿದೆ. ಅಂತರ್ಜಾತಿ ವಿವಾಹ ಮಾಡಿಕೊಂಡವರ ಮೇಲೆ ಹಲ್ಲೆ, ಬೆದರಿಕೆ, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರ, ಮಾನಸಿಕ ಕಿರುಕುಳ ಹಾಗೂ ಕೊಲೆಗಳಂತಹ ಪ್ರಕರಣಗಳು ಮರ್ಯಾದೆಯ ಹೆಸರಿನಲ್ಲಿ ನಡೆಯುತ್ತಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ: ಜಾಗ ಗುರುತಿಸಿ ಆಗಿದೆ, ಮೆಡಿಕಲ್ ಕಾಲೇಜು ಸ್ಥಾಪಿಸಿ: ರಾಜ್ಯ ಸರ್ಕಾರಕ್ಕೆ ಶಾಸಕ ಯಶ್ಪಾಲ್ ಸುವರ್ಣ ಆಗ್ರಹ
ಈ ರೀತಿಯ ಕೃತ್ಯಗಳು ಭಾರತದ ಸಂವಿಧಾನದ ಅನುಚ್ಛೇದ 14, 15, 19 ಮತ್ತು 21 ನೀಡುವ ಸಮಾನತೆ, ಸ್ವಾತಂತ್ರ್ಯ ಮತ್ತು ವೈಯಕ್ತಿಕ ಗೌರವಕ್ಕೆ ವಿರುದ್ಧವಾಗಿವೆ ಎಂದು ಮಸೂದೆ ಸ್ಪಷ್ಟಪಡಿಸಿದೆ.
ವಿವಾಹಕ್ಕೆ ಪೋಷಕರ ಅನುಮತಿ ಅಗತ್ಯವಿಲ್ಲ
ಹೊಸ ಮಸೂದೆ ಪ್ರಕಾರ ವಯಸ್ಕ ಗಂಡು ಮತ್ತು ಹೆಣ್ಣು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯಾಗಲು ಯಾವುದೇ ಪೋಷಕರು ಅಥವಾ ಕುಟುಂಬ ಸದಸ್ಯರ ಅನುಮತಿ ಅಗತ್ಯವಿಲ್ಲ. ಈ ವಿವಾಹಕ್ಕೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ.
ಅಂತರ್ಜಾತಿ ವಿವಾಹ ಮಾಡಲು ಬಯಸುವವರು ತಮ್ಮ ವಯಸ್ಸು ಮತ್ತು ಒಟ್ಟಾಗಿ ಬದುಕುವ ಇಚ್ಛೆಯ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಮೌಖಿಕ ಅಥವಾ ಲಿಖಿತ ಡಿಕ್ಲರೇಷನ್ ನೀಡಬಹುದು. ಈ ಮಾಹಿತಿ ಬಳಿಕ ಸಂಬಂಧಿಸಿದ ಪೊಲೀಸ್ ಠಾಣೆಗೆ ರವಾನಿಸಲಾಗುತ್ತದೆ.
ಮರ್ಯಾದಾ ಅಪರಾಧಗಳಿಗೆ ಕಠಿಣ ಶಿಕ್ಷೆ
ಮಸೂದೆ ಪ್ರಕಾರ ಮರ್ಯಾದೆಯ ಹೆಸರಿನಲ್ಲಿ ನಡೆಯುವ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ.
ಮರ್ಯಾದಾ ಹತ್ಯೆ: ಕನಿಷ್ಠ 5 ವರ್ಷ ಜೈಲು
ಗಂಭೀರ ಹಲ್ಲೆ: ಕನಿಷ್ಠ 3 ವರ್ಷ ಜೈಲು ಹಾಗೂ 3 ಲಕ್ಷದವರೆಗೆ ದಂಡ
ಸಣ್ಣ ಹಲ್ಲೆ: ಕನಿಷ್ಠ 2 ವರ್ಷ ಕಠಿಣ ಕಾರಾಗೃಹ ಮತ್ತು 2 ಲಕ್ಷದವರೆಗೆ ದಂಡ
ಬೆದರಿಕೆ: 3ರಿಂದ 5 ವರ್ಷ ಜೈಲು ಹಾಗೂ 2 ಲಕ್ಷದವರೆಗೆ ದಂಡ
- ಪಿತೂರಿ, ಸಾಕ್ಷ್ಯ ನಾಶ, ನೇರ ಅಥವಾ ಪರೋಕ್ಷವಾಗಿ ಅಪರಾಧ ಕೃತ್ಯಸಲ್ಲಿ ಭಾಗಿಯಾದರೆ ಶಿಕ್ಷೆ
ಈ ಪ್ರಕರಣಗಳು ಜಾಮೀನು ರಹಿತ ಅಪರಾಧಗಳಾಗಿ ಪರಿಗಣಿಸಲ್ಪಡುವುದಾಗಿ ಮಸೂದೆ ಹೇಳುತ್ತದೆ.
ಇದನ್ನೂ ಓದಿ: ಅಪರೂಪದಲ್ಲಿ ಅಪರೂಪ! 25 ವರ್ಷದ ಗರ್ಭಿಣಿ ಜನ್ಮ ನೀಡಿದ ಮಗುವಿನ ಕೆಜಿ ಎಷ್ಟು ಗೊತ್ತಾ?
ದಂಪತಿಗಳಿಗೆ ರಕ್ಷಣೆ ವ್ಯವಸ್ಥೆ
ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ಪೊಲೀಸ್ ರಕ್ಷಣೆ ಮತ್ತು ಸುರಕ್ಷಿತ ಆಶ್ರಯ ಒದಗಿಸುವ ವ್ಯವಸ್ಥೆಯೂ ಮಸೂದೆಯಲ್ಲಿ ಸೇರಿಸಲಾಗಿದೆ. ಅಂತರ್ಜಾತಿ ಅಥವಾ ಪ್ರೇಮ ವಿವಾಹಗಳನ್ನು ವಿರೋಧಿಸಿ ಪಂಚಾಯಿತಿ ಅಥವಾ ಗುಂಪು ಸೇರಿ ತೀರ್ಮಾನ ತೆಗೆದುಕೊಳ್ಳುವುದನ್ನೂ ನಿಷೇಧಿಸಲಾಗಿದೆ.
ಮದುವೆ ಭರವಸೆ ನೀಡಿ ವಂಚನೆ ಮಾಡಿದರೆ ‘ಅತ್ಯಾಚಾರ’
ಮದುವೆಯ ಭರವಸೆ ನೀಡಿ ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿ ಬಳಿಕ ಜಾತಿ ಕಾರಣ ನೀಡಿ ಮದುವೆ ನಿರಾಕರಿಸಿದರೆ ಅದನ್ನು ಅತ್ಯಾಚಾರ ಪ್ರಕರಣ ಎಂದು ಪರಿಗಣಿಸಲು ಮಸೂದೆ ಅವಕಾಶ ನೀಡಿದೆ. ಇಂತಹ ಪ್ರಕರಣಗಳಲ್ಲಿ ಕನಿಷ್ಠ 5 ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಜಾತಿ ಕಾರಣಕ್ಕಾಗಿ ಮದುವೆ ನಿರಾಕರಿಸುತ್ತಿಲ್ಲ ಎನ್ನುವುದಾದರೆ ಅದನ್ನು ಸಾಬೀತುಪಡಿಸಬೇಕು. ಯುವತಿಯು ಬೇರೆ ಒತ್ತಡಗಳಿಗೆ ಮದುವೆ ನಿರಾಕರಿಸಿದರೆ ಈ ನಿಯಮ ಅನ್ವಯ ಆಗುವುದಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

