ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೃಹ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಇಲ್ಲ ಮತ್ತು ಮುಂದಿನ ದಿನಗಳಲ್ಲೂ ಕೊರತೆ ಉಂಟಾಗುವ ಸಾಧ್ಯತೆ ಇಲ್ಲ ಎಂದು ಜಿಲ್ಲಾಧಿಕಾರಿ ದರ್ಶನ ಎಚ್.ವಿ ತಿಳಿಸಿದ್ದಾರೆ.
ಶುಕ್ರವಾರ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರಸ್ತುತ ನಿಯಮದಂತೆ ಪ್ರತಿ 25 ದಿನಕ್ಕೊಮ್ಮೆ ಒಂದು ಎಲ್‌ಪಿಜಿ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು. ಜನರು ಆತಂಕಪಡದೆ ಅನಾವಶ್ಯಕವಾಗಿ ಒಂದಕ್ಕಿಂತ ಹೆಚ್ಚು ಸಿಲಿಂಡರ್ ಬುಕ್ ಮಾಡಲು ಪ್ರಯತ್ನಿಸಬಾರದು ಎಂದು ಮನವಿ ಮಾಡಿದರು.

ಸಂಗ್ರಹಣೆ ತಡೆಗೆ ಕಠಿಣ ಕ್ರಮ
ಎಲ್‌ಪಿಜಿ ಏಜೆನ್ಸಿಗಳು ಹೆಚ್ಚುವರಿ ಸಿಲಿಂಡರ್ ಸಂಗ್ರಹಿಸಿಡದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯ ಅಧಿಕಾರಿಗಳು ಈಗಾಗಲೇ ಹಲವಾರು ಸಂಗ್ರಹಣಾ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಜನರ ಗಮನಕ್ಕೆ ಈ ಹೋಟೆಲ್ನಲ್ಲಿ ಮಧ್ಯಾಹ್ನದ ಊಟ ಇರುವುದಿಲ್ಲ
ಇದರ ಜೊತೆಗೆ ಐಒಸಿಎಲ್ (IOCL), ಬಿಪಿಸಿಎಲ್ (BPCL) ಮತ್ತು ಎಚ್‌ಪಿಸಿಎಲ್ (HPCL) ಸೇರಿದಂತೆ ಪ್ರಮುಖ ತೈಲ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸರಬರಾಜು ಸರಪಳಿಯನ್ನು ಸುಗಮಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಉತ್ಪಾದನೆ ಹಾಗೂ ಆಮದು ಮುಂದುವರಿಕೆ
ಎಂಆರ್‌ಪಿಎಲ್ (MRPL) ನಲ್ಲಿ ಎಲ್‌ಪಿಜಿ ಉತ್ಪಾದನೆ ಯಾವುದೇ ಕಡಿತವಿಲ್ಲದೆ ಮುಂದುವರಿಯುತ್ತಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ದೃಢಪಡಿಸಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ. ಜೊತೆಗೆ ಐಒಸಿಎಲ್‌ಗೆ ಅಗತ್ಯವಿರುವ ಎಲ್‌ಪಿಜಿ ಆಮದು ಕೂಡ ಸಾಮಾನ್ಯ ರೀತಿಯಲ್ಲೇ ನಡೆಯುತ್ತಿದೆ.
ಇದನ್ನೂ ಓದಿ: ಯಲಹಂಕ ಗ್ಯಾಸ್ ಪವರ್ ಪ್ಲಾಂಟ್ ಬಂದ್: ಬೆಂಗಳೂರಿನಲ್ಲಿ ವಿದ್ಯುತ್ ಕಡಿತ ಭೀತಿ
ಆದರೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸರಬರಾಜು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಬರುವವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಅಗತ್ಯ ಸೇವೆಗಳಿಗೆ ನಿರಂತರ ಪೂರೈಕೆ
ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ವಸತಿ ಶಾಲೆಗಳು, ಹಾಸ್ಟೆಲ್‌ಗಳು, ಸೇನಾ ಕ್ಯಾಂಟೀನ್‌ಗಳು, ಸಿಐಎಸ್‌ಎಫ್ ಘಟಕಗಳು ಹಾಗೂ ಕಾರಾಗೃಹಗಳಿಗೆ ಎಲ್‌ಪಿಜಿ ಸರಬರಾಜು ಯಾವುದೇ ಅಡಚಣೆ ಇಲ್ಲದೆ ಮುಂದುವರಿಯಲಿದೆ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.
ಹಾಗೆಯೇ ದೇವಸ್ಥಾನಗಳು, ಚರ್ಚ್‌ಗಳು ಮತ್ತು ಮಸೀದಿಗಳಲ್ಲಿ ನಡೆಯುವ ಸಮುದಾಯ ಅಡುಗೆಗಳಿಗೆ ನಿರಂತರವಾಗಿ ಅನಿಲ ಪೂರೈಕೆ ಮಾಡಲು ಏಜೆನ್ಸಿಗಳಿಗೆ ಸೂಚನೆ ನೀಡಲಾಗಿದೆ. ರೈಲು ನಿಲ್ದಾಣ ಅಧಿಕಾರಿಗಳಿಂದ ಬಂದಿರುವ ಬೇಡಿಕೆಯನ್ನೂ ಆದ್ಯತೆಯಿಂದ ಪರಿಗಣಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

