ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಸೇವೆಗೆ ಮಹತ್ವದ ಹೆಜ್ಜೆಯಾಗಿ ‘ದುರ್ಗಿ’ ಎಂಬ ಉಚಿತ ಆಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲು ಸಿದ್ಧತೆಗಳನ್ನು ನಡೆಸಲಾಗಿದೆ. ಈ ಸೇವೆಯನ್ನು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತದ ಪೂರಕ ಸಂಸ್ಥೆಯಾಗಿರುವ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಆರಂಭಿಸಲಾಗುತ್ತಿದೆ.
ಗ್ರಾಮೀಣ ಪ್ರದೇಶಗಳಲ್ಲಿ ತುರ್ತು ವೈದ್ಯಕೀಯ ಸೇವೆಗಳ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಈ ಆಂಬುಲೆನ್ಸ್ ಸೇವೆ ಸ್ಥಳೀಯ ಜನತೆಗೆ ವೇಗವಾದ ಮತ್ತು ಸುಲಭವಾದ ಆರೋಗ್ಯ ಸಹಾಯವನ್ನು ಒದಗಿಸುವ ಉದ್ದೇಶ ಹೊಂದಿದೆ. ‘ದುರ್ಗಿ’ ಎಂಬ ಹೆಸರಿನಲ್ಲಿ ಆರಂಭಗೊಳ್ಳುತ್ತಿರುವ ಈ ಸೇವೆ, ಸಮಾಜದ ಎಲ್ಲ ವರ್ಗಗಳಿಗೂ ಉಪಯುಕ್ತವಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮೋಂತಿಮಾರು ಶ್ರೀ ಕ್ಷೇತ್ರದಲ್ಲಿ ಮಾ.23ರಿಂದ ವಾರ್ಷಿಕ ಜಾತ್ರಾ ಮಹೋತ್ಸವ, ಜೈ ಹನುಮಾನ್ ಸಿನಿ ನಾಟಕ ಪ್ರದರ್ಶನ
ಆಂಬುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮವು ಮಾರ್ಚ್ 22 ರಂದು ಬೆಳಗ್ಗೆ 11.30ಕ್ಕೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದ್ದು, ಖ್ಯಾತ ಮುಳುಗು ತಜ್ಞ ಹಾಗೂ ಜೀವರಕ್ಷಕ ಈಶ್ವರ್ ಮಲ್ಪೆ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಸೇವೆಗೆ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಧಾರ್ಮಿಕ ಮುಖಂಡರು, ಟ್ರಸ್ಟ್ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿರುವ ನಿರೀಕ್ಷೆಯಿದೆ.
ಈ ಮಹತ್ವದ ಯೋಜನೆ ತುರ್ತು ಪರಿಸ್ಥಿತಿಗಳಲ್ಲಿ ಜೀವ ರಕ್ಷಣೆಗಾಗಿ ಇದು ಮಹತ್ತರ ಪಾತ್ರ ವಹಿಸಲಿದೆ. ‘ದುರ್ಗಿ’ ಆಂಬುಲೆನ್ಸ್ ಸೇವೆ ಗ್ರಾಮೀಣ ಆರೋಗ್ಯ ಸೇವೆಯಲ್ಲೊಂದು ಹೊಸ ಅಧ್ಯಾಯವನ್ನು ಆರಂಭಿಸುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

