ಮಂಗಳೂರು: ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ತುರ್ತು ಟ್ರ್ಯಾಕ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವಿನ ಪ್ರಯಾಣಿಕರ ರೈಲು ಸೇವೆಗಳಲ್ಲಿ ಮಹತ್ವದ ಬದಲಾವಣೆಗಳನ್ನು ಘೋಷಿಸಲಾಗಿದೆ.
ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ರಸ್ತೆ ನಡುವಿನ ಪ್ಯಾಸೆಂಜರ್ ರೈಲುಗಳನ್ನು ಒಟ್ಟು 35 ದಿನಗಳ ಕಾಲ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ರೈಲು ಸಂಖ್ಯೆ 56629 (ಮಂಗಳೂರು–ಸುಬ್ರಹ್ಮಣ್ಯ ರಸ್ತೆ) ಮತ್ತು 56630 (ಸುಬ್ರಹ್ಮಣ್ಯ ರಸ್ತೆ–ಮಂಗಳೂರು) ರೈಲುಗಳು ಮಾರ್ಚ್ 23 ರಿಂದ ಏಪ್ರಿಲ್ 14ರವರೆಗೆ ಹಾಗೂ ಮತ್ತೆ ಜೂನ್ 10 ರಿಂದ ಜೂನ್ 21ರವರೆಗೆ ಸಂಚರಾ ಸ್ಥಗಿತಗೊಳ್ಳಲಿದೆ.

ಇದರ ಜೊತೆಗೆ, ಏಪ್ರಿಲ್ ತಿಂಗಳಲ್ಲಿ ಕೆಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲೂ ಬದಲಾವಣೆ ಮಾಡಲಾಗಿದೆ. ಯಶವಂತಪುರ–ಕಾರವಾರ (16515), ಯಶವಂತಪುರ–ಮಂಗಳೂರು (16575, 16539) ಎಕ್ಸ್‌ಪ್ರೆಸ್ ರೈಲುಗಳು ಸುಮಾರು 20 ನಿಮಿಷಗಳಷ್ಟು ವಿಳಂಬವಾಗಲಿವೆ.
ಇದನ್ನೂ ಓದಿ: ಬಂಟ್ವಾಳ: ಮಸೀದಿ ಮೆಟ್ಟಿಲೇರಿ ‘ಸೀಯಾಳ’ ಸ್ವೀಕರಿಸಿದ ದೈವ!
ಮಂಗಳೂರು–ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು (56229) ಏಪ್ರಿಲ್ 21ರಿಂದ ಜೂನ್ 9ರವರೆಗೆ 55 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ.
ಯುಗಾದಿ ಮತ್ತು ರಮ್ಜಾನ್ ಹಬ್ಬದ ಹಿನ್ನೆಲೆ ಹೆಚ್ಚುವರಿ ಪ್ರಯಾಣಿಕರ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಯಶವಂತಪುರ–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಓಡಿಸಲಾಗುತ್ತಿದೆ. ಈ ರೈಲು ಮಾರ್ಚ್ 20ರಂದು ಬೆಳಿಗ್ಗೆ 11:50ಕ್ಕೆ ಯಶವಂತಪುರದಿಂದ ಹೊರಟು ಮಾರ್ಚ್ 21ರಂದು ಬೆಳಗ್ಗೆ 6:45ಕ್ಕೆ ಮಡಗಾಂವ್ ತಲುಪಲಿದೆ. ಮರು ಪ್ರಯಾಣದಲ್ಲಿ ಮಾರ್ಚ್ 22ರಂದು ಬೆಳಗ್ಗೆ 11ಕ್ಕೆ ಮಡಗಾಂವ್‌ನಿಂದ ಹೊರಟು ಮಾರ್ಚ್ 24ರಂದು ಬೆಳಗ್ಗೆ 5:20ಕ್ಕೆ ಬೆಂಗಳೂರು ಕ್ಯಾಂಟೋನ್ಮೆಂಟ್ ತಲುಪಲಿದೆ.
ಈ ವಿಶೇಷ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರಸ್ತೆ, ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್, ಮಲ್ಪೆ, ಉಡುಪಿ, ಬಾರ್ಕೂರು, ಕುಂದಾಪುರ ಸೇರಿದಂತೆ ಅನೇಕ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿದೆ.
ಇದಲ್ಲದೆ, ದಕ್ಷಿಣ ಮಧ್ಯ ರೈಲ್ವೆ ವ್ಯಾಪ್ತಿಯಲ್ಲಿಯೂ ಕೆಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಕರ್ಣೂಲ್–ಕಾಚೇಗುಡ ಮತ್ತು ರಾಯಚೂರು–ಕಾಚೇಗುಡ ಮಾರ್ಗಗಳಲ್ಲಿ ಮಾರ್ಚ್ ಮಧ್ಯದಿಂದ ಏಪ್ರಿಲ್ 1ರವರೆಗೆ ಹಲವಾರು ಸೇವೆಗಳು ರದ್ದಾಗಿವೆ ಎಂದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

