ಸುಳ್ಯ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಲಖಪತಿ ದೀದಿ’ (Lakhpati Deedi) ಕಾರ್ಯಕ್ರಮದ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರ ಸಂವಾದ ನಡೆಸಲು ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ಅವರು ಆಯ್ಕೆಯಾಗಿದ್ದಾರೆ. ನವದೆಹಲಿಯಲ್ಲಿ ಮಾರ್ಚ್ 11ರಂದು ನಡೆಯಲಿರುವ ಈ ಸಂವಾದ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದಿಂದ ಒಟ್ಟು 22 ‘ಲಖಪತಿ ದೀದಿ’ ಮಹಿಳೆಯರನ್ನು ಆಯ್ಕೆ ಮಾಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಕೈಕ ಪ್ರತಿನಿಧಿ ಮೋಹಿನಿ ಅವರಾಗಿದ್ದಾರೆ.
ಮಹಿಳಾ ಸ್ವ-ಸಹಾಯ ಗುಂಪುಗಳ (SHG) ಮೂಲಕ ವಾರ್ಷಿಕ 1 ಲಕ್ಷ ರೂಪಾಯಿಗಿಂತ ಹೆಚ್ಚಿನ ಆದಾಯ ಗಳಿಸಿ ಆರ್ಥಿಕ ಸ್ವಾವಲಂಬನೆ ಸಾಧಿಸಿರುವ ಮಹಿಳೆಯರನ್ನು ಈ ಸಂವಾದಕ್ಕೆ ಆಯ್ಕೆ ಮಾಡಲಾಗಿದೆ.ಸಂಪಾಜೆ ಗ್ರಾಮದ ಪೇರಡ್ಕದ ವಿಶ್ವನಾಥ ಪಿ.ಆರ್. ಅವರ ಪತ್ನಿಯಾಗಿರುವ ಮೋಹಿನಿ ಅವರು, ಸಂಜೀವಿನಿ ಒಕ್ಕೂಟ ಮತ್ತು ಕೃಷಿ ಇಲಾಖೆಯ ಸಹಕಾರದೊಂದಿಗೆ ಕೃಷಿ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಪಿಲಿಕುಳ ಝೂನಲ್ಲಿ 7 ಮರಿಗಳಿಗೆ ಜನ್ಮ ನೀಡಿದ ʼಗೀತಾʼ; ಮೊದಲ ಬಾರಿ ಯಶಸ್ವಿ ನರಿಗಳ ಸಂತಾನೋತ್ಪತ್ತಿ
“ಈ ಅವಕಾಶ ಅನಿರೀಕ್ಷಿತ ಮತ್ತು ಅತ್ಯಂತ ಸಂತಸ ತಂದಿದೆ. ಕೃಷಿಕರ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಈ ಗೌರವ ಸಿಕ್ಕಿದೆ” ಎಂದು ಮೋಹಿನಿ ಅವರು ಸಂತಸ ಹಂಚಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

