ತೀರ್ಥಹಳ್ಳಿ: ತೆಂಕುತಿಟ್ಟು ಯಕ್ಷಗಾನದ ಅಗ್ರಗಣ್ಯ ಕಲಾವಿದ ಹಾಗೂ ‘ದಶಾವತಾರಿ’ ಎಂದೇ ಖ್ಯಾತಿ ಪಡೆದಿದ್ದ ಹಿರಿಯ ವೇಷಧಾರಿ ಸೂರಿಕುಮೇರು ಗೋವಿಂದ ಭಟ್ (88) ಅವರು ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ನಿಧನರಾದರು. ಅವರು ತೀರ್ಥಹಳ್ಳಿಯ ತಮ್ಮ ಹಿರಿಯ ಪುತ್ರನ ಮನೆಯಲ್ಲಿ ಕೊನೆಯುಸಿರೆಳೆದರು.
ಮೂರು ಪುತ್ರರನ್ನು ಹೊಂದಿದ್ದ ಅವರು ಯಕ್ಷಗಾನ ಕ್ಷೇತ್ರದಲ್ಲಿ ‘ನಡೆದಾಡುವ ವಿಶ್ವಕೋಶ’ ಎಂದೇ ಪ್ರಸಿದ್ಧರಾಗಿದ್ದರು. 1951ರಲ್ಲಿ ಯಕ್ಷಗಾನ ಮೇಳಕ್ಕೆ ಸೇರ್ಪಡೆಗೊಂಡು ಸುಮಾರು 70 ವರ್ಷಗಳ ಕಾಲ ಧರ್ಮಸ್ಥಳ, ಮೂಲ್ಕಿ, ಕೂಡು, ಸುರತ್ಕಲ್ ಸೇರಿದಂತೆ ಹಲವು ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು.

ಕೌರವ, ರಕ್ತಬೀಜ, ಇಂದ್ರಜಿತು, ಕರ್ಣ, ನರಕಾಸುರ, ಹಿರಣ್ಯಕಶಿಪು, ಭೀಷ್ಮ, ಅರ್ಜುನ, ಹನುಮಂತ ಸೇರಿದಂತೆ ಅನೇಕ ಪೌರಾಣಿಕ ಪಾತ್ರಗಳನ್ನು ಅವರು ಅದ್ಭುತವಾಗಿ ನಿರ್ವಹಿಸಿ ಅಪಾರ ಜನಮೆಚ್ಚುಗೆ ಪಡೆದಿದ್ದರು. ಛಂದೋಬದ್ಧ ಸಂಭಾಷಣೆ ಮತ್ತು ನೃತ್ಯದಲ್ಲಿನ ಪ್ರಾವೀಣ್ಯದಿಂದ ಅವರು ವಿಶಿಷ್ಟ ಸ್ಥಾನ ಪಡೆದಿದ್ದರು.
ಇದನ್ನೂ ಓದಿ: ಜಿಲ್ಲಾ ಅತ್ಯುತ್ತಮ ಎಸ್.ಡಿ.ಎಂ.ಸಿ ಪ್ರಶಸ್ತಿಗೆ ಮಂಚಿ-ಕೊಳ್ನಾಡು ಸರ್ಕಾರಿ ಪ್ರೌಢಶಾಲೆ ಆಯ್ಕೆ
2008ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2016ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಅವರಿಗೆ ಸಂದಿವೆ. ಜೊತೆಗೆ ಅವರು ಮಣಿ ಮೇಖಲೆ, ಕನಕ ರೇಖೆ, ಕಾವೇರಿ ಮಹಾತ್ಮ ಸೇರಿದಂತೆ ಏಳು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ.
ಭಾರತದ ಹೊರತಾಗಿಯೂ ಜಪಾನ್, ದುಬೈ, ಅಬುದಾಬಿ ಸೇರಿದಂತೆ ಹಲವು ದೇಶಗಳಲ್ಲಿ ಯಕ್ಷಗಾನ ಪ್ರದರ್ಶಿಸಿ ಕಲೆಗೌರವ ತಂದಿದ್ದಾರೆ. ದಿಲ್ಲಿಯಲ್ಲಿ ರಾಷ್ಟ್ರಪತಿ ಎದುರು ಯಕ್ಷಗಾನ ಪ್ರದರ್ಶನ ನೀಡಿದ್ದ ಗೌರವವೂ ಅವರದ್ದಾಗಿದೆ. ಅವರ ಅಗಲಿಕೆ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಕಲಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

