ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರೈಲು ನಿಲ್ದಾಣಗಳಲ್ಲಿ ಒಂದಾದ ಕಬಕ-ಪುತ್ತೂರು ನಿಲ್ದಾಣದ ಪ್ರಯಾಣಿಕರಿಗೆ ಇನ್ಮುಂದೆ ಮಳೆ ಮತ್ತು ಬಿಸಿಲಿನ ಕಾಟವಿರುವುದಿಲ್ಲ. ನಿಲ್ದಾಣದ ಅಭಿವೃದ್ಧಿಗಾಗಿ 2.91 ಕೋಟಿ ರೂಪಾಯಿ ವೆಚ್ಚದ ಬೃಹತ್ ಶೆಲ್ಟರ್ ನಿರ್ಮಾಣ ಯೋಜನೆಗೆ ಮಂಜೂರಾತಿ ದೊರೆತಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.
ಪ್ರಸ್ತುತ ನಿಲ್ದಾಣದಲ್ಲಿ ಕೇವಲ 531 ಚದರ ಮೀಟರ್ ಉದ್ದದ ಶೆಲ್ಟರ್ ಇದೆ. ಹೊಸ ಯೋಜನೆಯಡಿ ಇದನ್ನು 3392 ಚದರ ಮೀಟರ್‌ಗೆ ವಿಸ್ತರಿಸಲಾಗುವುದು. ಇದರಿಂದ ಪ್ರಯಾಣಿಕರು ಮಳೆಗಾಲದಲ್ಲಿ ನೆನೆಯದೆ ಮತ್ತು ಬೇಸಿಗೆಯಲ್ಲಿ ಬಿಸಿಲಿಗೆ ಒಡ್ಡಿಕೊಳ್ಳದೆ ರೈಲು ಹತ್ತಲು ಅನುಕೂಲವಾಗಲಿದೆ.

ಪ್ಲಾಟ್‌ಫಾರ್ಮ್ 1 ಮತ್ತು 2 ರ ನಡುವೆ ಪ್ರಯಾಣಿಕರ ಸುಲಭ ಸಂಚಾರಕ್ಕಾಗಿ 1.33 ಕೋಟಿ ರೂ. ವೆಚ್ಚದಲ್ಲಿ ಎರಡು ಲಿಫ್ಟ್‌ಗಳನ್ನು ಅಳವಡಿಸುವ ಪ್ರಸ್ತಾವನೆ ಸದ್ಯ ರೈಲ್ವೆ ಕೇಂದ್ರ ಕಚೇರಿಯ ಪರಿಶೀಲನಾ ಹಂತದಲ್ಲಿದೆ. ಈಗಾಗಲೇ ಶೆಲ್ಟರ್ ನಿರ್ಮಾಣಕ್ಕೆ ಸ್ಥಳ ಗುರುತು ಮಾಡುವ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ.
ಇದನ್ನೂ ಓದಿ: ಪುತ್ತೂರಿನ ನವದೀಪ್ ಎಲ್‌ಪಿಜಿ ಏಜೆನ್ಸಿ ಗ್ರಾಹಕರಿಗೆ ಸಂಕಷ್ಟ: ಬುಕ್ ಮಾಡಿದರೂ ಸಿಗದ ಸಿಲಿಂಡರ್! ಕಾಯ್ದಿರಿಸಿದ ಹಂಡೆಗಳು ಏನಾದವು?

ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು 2024ರ ನವೆಂಬರ್‌ನಲ್ಲಿ ರೈಲ್ವೆ ಇಲಾಖೆಗೆ ಪತ್ರ ಬರೆದು ಇಲ್ಲಿನ ಪ್ರಯಾಣಿಕರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಈಗ ಅನುದಾನ ಬಿಡುಗಡೆ ಮಾಡಿದೆ. ಈ ಕಾರ್ಯಕ್ಕಾಗಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


