ಪುತ್ತೂರು: ಜಾಗತಿಕ ಮಟ್ಟದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ ಪರಿಣಾಮವಾಗಿ ಭಾರತದಲ್ಲಿಯೂ ಎಲ್‌ಪಿಜಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಸರ್ಕಾರಗಳು ಕೊರತೆ ಆಗದಂತೆ ಕ್ರಮ ಕೈಗೊಳ್ಳುತ್ತಿದ್ದರೂ, ಪುತ್ತೂರಿನ ಕಲ್ಲಿಮಾರ್ ಪ್ರದೇಶದಲ್ಲಿರುವ ನವದೀಪ್ ಎಂಟರ್‌ಪ್ರೈಸಸ್‌ನಲ್ಲಿ ಗ್ರಾಹಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಮಾರ್ಚ್ 30ರಂದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಏಜೆನ್ಸಿ ಮುಂದೆ ಕ್ಯೂನಲ್ಲಿ ನಿಂತಿರುವುದು ಕಂಡುಬಂದಿತು. ಎಲ್‌ಪಿಜಿ ಬುಕ್ ಮಾಡಿ ಒಟಿಪಿ ಪಡೆದರೂ 7ರಿಂದ 10 ದಿನಗಳವರೆಗೆ ಸಿಲಿಂಡರ್ ಸಿಗದೆ, ಗ್ರಾಹಕರು ಏಜೆನ್ಸಿ ಬಳಿ ತಂದ ಖಾಲಿ ಸಿಲಿಂಡರ್‌ಗಳೊಂದಿಗೆ ಮನೆಗೆ ಹಿಂತಿರುಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

“ನಾಳೆ ಬನ್ನಿ”, “ಐದು ದಿನಗಳ ನಂತರ ಬನ್ನಿ” ಎಂಬ ಉತ್ತರಗಳನ್ನು ನೀಡಲಾಗುತ್ತಿದ್ದು, ಹೇಳಿದ ದಿನದಂದು ಬಂದಾಗ “ಸ್ಟಾಕ್ ಇಲ್ಲ” ಎಂದು ಹೇಳಲಾಗುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕ್ಯೂ ನಿಂತಿದ್ದಾರೆ ಎಂದು ತಿಳಿದರೂ ಕೇವಲ ಒಂದೇ ಕೌಂಟರ್ ವ್ಯವಸ್ಥೆ ಮಾಡುವ ಮೂಲಕ ನಿರ್ಲಕ್ಷ್ಯ ತೋರಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಇಂಧನ ಕೊರತೆ ವದಂತಿಗೆ ಕಿವಿಗೊಡಬೇಡಿ: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದಾಸ್ತಾನು ಸಾಕಷ್ಟಿದೆ

ಕೆಲವು ಆಟೋ ರಿಕ್ಷಾ ಚಾಲಕರು ಒಂದೇ ಬಾರಿಗೆ ಮೂರ್ನಾಲಕ್ಕು ಸಿಲಿಂಡರ್‌ಗಳನ್ನು ತೆಗೆದುಕೊಂಡು ಹೋಗುತ್ತಿರುವುದು ಕಂಡು ಕ್ಯೂ ನಿಂತ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಒಬ್ಬರಿಗೆ ಒಂದೇ ಸಿಲಿಂಡರ್ ನೀಡುವ ಕ್ರಮ ಕೈಗೊಳ್ಳಲಾಗಿದೆ.
ಕೆಲವರು ಕ್ಯೂ ನಿಲ್ಲದೆ ನೇರವಾಗಿ ಕಚೇರಿಯೊಳಗೆ ಪ್ರವೇಶಿಸಿ ಪ್ರಭಾವ ಬೀರಿ ಚೀಟಿ ಪಡೆದು ಸಿಲಿಂಡರ್ ಕೊಂಡೊಯ್ಯತ್ತಿರುವುದನ್ನು ನೋಡಿದ ಇತರೆ ಗ್ರಾಹಕರ ಕಣ್ಣುಗಳು ಕೆಂಪಗಾದವು. ಈ ಕುರಿತು ವಾಗ್ವಾದವೂ ನಡೆಯಿತು.

ಪುತ್ತೂರಿನಲ್ಲಿರುವ ಇತರೆ ಗ್ಯಾಸ್ ಏಜೆನ್ಸಿಗಳಲ್ಲಿ ಯಾವುದೇ ಸಮಸ್ಯೆಗಳು ಆಗುತ್ತಿಲ್ಲ. ಆದರೆ ನವದೀಪ್ ಏಜೆನ್ಸಿಯಲ್ಲಿ ಮಾತ್ರ ಯಾಕೆ ಈ ಸಮಸ್ಯೆ? ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ಒಟಿಪಿ ಪಡೆದಿದ್ದರೂ ನಮಗೆ ಸಿಲಿಂಡರ್ ಸಿಗುತ್ತಿಲ್ಲ. ಹಾಗಾದರೆ ಬುಕ್ ಮಾಡಿದ ಸಿಲಿಂಡರ್ ಗಳು ಏನಾದವು ಎಂದು ಗ್ರಾಹಕರು ಪ್ರಶ್ನಿಸುತ್ತಿದ್ದಾರೆ.
ಆದರೆ, ಕಳೆದ ಐದು ದಿನಗಳ ಹಿಂದೆ ಲೋಡ್ ಬಾರದ ಪರಿಣಾಮ ಈ ಸಮಸ್ಯೆ ಉಂಟಾಗಿದೆ. ಸರಿಯಾಗಿ ಲೋಡ್ ಬರುತ್ತಿಲ್ಲ. ಇಂದು ಒಂದು ಲೋಡ್ ಬಂದಿದೆ. ಇನ್ನು ನಾಳೆ ಬರುತ್ತದೆ. ಕೆಲವು ದಿನಗಳಲ್ಲಿ ಈ ಸಮಸ್ಯೆ ಸರಿಯಾಗಲಿದೆ ಎಂದು ಡಿಸ್ಟ್ರಿಬ್ಯೂಟರ್ ಶಿವಕುಮರ್ ಶೆಟ್ಟಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

