ಜೈಪುರ: ರಾಜಸ್ಥಾನದ ಪ್ರಸಿದ್ಧ ‘ಪಿಂಕ್ ಸಿಟಿ’ ಜೈಪುರದಲ್ಲಿ ನಡೆದ ಫೋಟೋಶೂಟ್ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ರಷ್ಯಾದ ಮೂಲದ ಫೋಟೋಗ್ರಾಫರ್ ಜೂಲಿಯಾ ಬುರುಲೆವಾ ಅವರು ತಮ್ಮ ಕಲಾತ್ಮಕ ಚಿತ್ರಗಳಿಗಾಗಿ ಜೀವಂತ ಆನೆಯೊಂದಕ್ಕೆ ಸಂಪೂರ್ಣವಾಗಿ ಗುಲಾಬಿ ಬಣ್ಣ ಬಳಿದಿರುವುದು ಈ ವಿವಾದದ ಕೇಂದ್ರಬಿಂದುವಾಗಿದೆ.
ಜೈಪುರದ ಪಾರಂಪರಿಕ ಕಟ್ಟಡಗಳ ಹಿನ್ನೆಲೆಯಲ್ಲಿ ಮಾಡಲಾದ ಈ ಫೋಟೋಶೂಟ್‌ನಲ್ಲಿ, ಮಾಡೆಲ್ ಒಬ್ಬರು ಗುಲಾಬಿ ಬಣ್ಣ ಬಳಿದ ಆನೆಯ ಮೇಲೆ ಕುಳಿತು ಪೋಸ್ ನೀಡಿದ್ದಾರೆ. ಜೈಪುರದ ಸಂಸ್ಕೃತಿ ಮತ್ತು ‘ಗುಲಾಬಿ ನಗರ’ ಎಂಬ ಹೆಸರಿನಿಂದ ಪ್ರೇರಿತರಾಗಿ ಈ ವಿಶಿಷ್ಟ ಪ್ರಯತ್ನ ಮಾಡಿದ್ದಾಗಿ ಜೂಲಿಯಾ ತಿಳಿಸಿದ್ದಾರೆ. ಆದರೆ, ಆನೆಯ ಮೈಗೆ ಬಣ್ಣ ಬಳಿಯುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ, ಪ್ರಾಣಿ ಪ್ರೇಮಿಗಳು ಇದನ್ನು “ಪ್ರಾಣಿ ಹಿಂಸೆ” ಎಂದು ಕರೆದಿದ್ದಾರೆ.

ವಿವಾದದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಜೂಲಿಯಾ, “ಆನೆಯ ಮೈಗೆ ಹಚ್ಚಲಾದ ಬಣ್ಣವು ಸಂಪೂರ್ಣವಾಗಿ ಆರ್ಗಾನಿಕ್ (ನೈಸರ್ಗಿಕ) ಮತ್ತು ಸುರಕ್ಷಿತವಾಗಿದೆ. ಹಬ್ಬ ಹರಿದಿನಗಳಲ್ಲಿ ಆನೆಗಳನ್ನು ಅಲಂಕರಿಸಲು ಬಳಸುವ ಬಣ್ಣವನ್ನೇ ಇಲ್ಲಿ ಬಳಸಲಾಗಿದೆ. ಆನೆಗೆ ಯಾವುದೇ ನೋವು ಅಥವಾ ತೊಂದರೆ ಉಂಟುಮಾಡಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಶೂಟ್‌ಗಾಗಿ ಸರಿಯಾದ ಸ್ಥಳ ಮತ್ತು ಸಹಕರಿಸುವ ಆನೆ ಮಾಲೀಕರನ್ನು ಹುಡುಕಲು ತಾವು ಬಹಳ ಶ್ರಮವಹಿಸಿದ್ದಾಗಿ ಅವರು ಹೇಳಿದ್ದಾರೆ.
ಇದನ್ನೂ ಓದಿ: ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ವಿರಾಟ್ ಕೊಹ್ಲಿಯೇ ತಂದೆ!: ಯುವತಿಯ ಸ್ಫೋಟಕ ಹೇಳಿಕೆ

“ಬಣ್ಣ ಆರ್ಗಾನಿಕ್ ಇರಬಹುದು, ಆದರೆ ಗಂಟೆಗಟ್ಟಲೆ ಪ್ರಾಣಿಯ ಮೈಗೆ ಬಣ್ಣ ಹಚ್ಚಿ ಅದನ್ನು ಫೋಟೋಶೂಟ್‌ಗೆ ಬಳಸುವುದು ತಪ್ಪು. ಕಲಾತ್ಮಕತೆಗಾಗಿ ಎಐ (AI) ತಂತ್ರಜ್ಞಾನ ಬಳಸಬಹುದಿತ್ತು, ಮೂಕ ಪ್ರಾಣಿಯನ್ನು ಪೀಡಿಸುವುದು ಸರಿಯಲ್ಲ” ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆಯು ತನಿಖೆ ನಡೆಸುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


