ಮಹಾರಾಷ್ಟ್ರ : ಚಂದ್ರಾಪುರದಲ್ಲಿ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರ ಕೈಗೆ ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರುತ್ತಿದ್ದಂತೆ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ವಿಚಾರ ಬೆಳಕಿಗೆ ಬಂದಿದೆ.
22 ವರ್ಷದ ಯೋಗೇಶ್ ಬಹಿರವಾರ್ ಎಂಬಾತ ವಿವಾಹವಾಗಿ ಪತಿಯಿಂದ ದೂರವಾಗಿದ್ದ ಪ್ರಿಯಾಂಕಾ ವಾಂಧರ್ ಎಂಬ ಮಹಿಳೆಯನ್ನು ಪ್ರೀತಿಸುತ್ತಿದ್ದನು. ಈಕೆ ಯೋಗೇಶ್‌ಗಿಂತ ಏಳು ವರ್ಷ ದೊಡ್ಡವಳು. ಪತಿಯಿಂದ ದೂರವಾಗಿದ್ದ ಈಕೆಯೊಂದಿಗೆ ಯೋಗೇಶ್ ನೆಲೆಸಿದ್ದನು.

ಮಾ.14 ರಂದು ಮಹಿಳೆಯ ತಂದೆಗೆ ಕರೆ ಮಾಡಿ ನಿಮ್ಮ ಮಗಳು ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದಾಳೆ, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ ಎಂದು ಹೇಳಿದ್ದಾನೆ.
ಇದನ್ನೂ ಓದಿ7 ವರ್ಷಗಳ ಬಳಿಕ ಇರಾನ್ ತೈಲ ಖರೀದಿಸಿದ ಭಾರತ! ಇಲ್ಲಿದೆ ಸಂಪೂರ್ಣ ಮಾಹಿತಿ

ಕೂಡಲೇ ಮನೆಗೆ ದೌಡಾಯಿಸಿದ ಕುಟುಂಬಸ್ಥರು ಪ್ರಿಯಾಂಕಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಈಗಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಅಲ್ಲದೆ, ಮರಣೋತ್ತರ ಪರೀಕ್ಷೆಯನ್ನೂ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವರದಿಗಾಗಿ ಕಾಯುತ್ತಿದ್ದರು.
ಅರ್ಧ ತಿಂಗಳ ನಂತರ ಅಂದರೆ, ಏ.3 ರಂದು ಬಂದ ವರದಿ ನೋಡಿದ ಪೊಲೀಸರು ಶಾಕ್ ಆಗಿದ್ದು, ಇದು ಆತ್ಮಹತ್ಯೆಯಲ್ಲ, ಕೊಲೆ ಎಂಬ ವಿಚಾರ ಬೆಳಕಿಗೆಬಂದಿದೆ. ವರದಿಯ ಪ್ರಕಾರ, ಗಂಟಲು ಹಿಸುಕಿದ ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ. ಹೀಗಾಗಿ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಯೋಗೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಕೊಲೆ ವಿಚಾರ ಬಾಯಿಬಿಟ್ಟಿದ್ದಾನೆ.

ಪೊಲೀಸರ ಮಾಹಿತಿ ಪ್ರಕಾರ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು ಒಟ್ಟಿಗೆ ವಾಸಿಸುತ್ತಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕಾಲ ಉರುಳಿದಂತೆ, ಅವರ ನಡುವೆ ಕೆಲಕಾಲದಿಂದ ಜಗಳಗಳು ನಡೆಯುತ್ತಿದ್ದು, ವಿಶೇಷವಾಗಿ ಕುಟುಂಬ ಸಂಬಂಧಿತ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದವು. ಇದೇ ಕಾರಣದಿಂದ ಉಂಟಾದ ತೀವ್ರ ವಾಗ್ವಾದದ ವೇಳೆ, ಆರೋಪಿ ಮೊಬೈಲ್ ಚಾರ್ಜರ್ ಕೇಬಲ್ ಬಳಸಿಕೊಂಡು ಪ್ರಿಯಾಂಕಾಳ ಗಂಟಲು ಬಿಗಿದಿದ್ದಾನೆ. ಇದರಿಂದ ಆಕೆ ಸಾವನ್ನಪ್ಪಿದ್ದಾಳೆ.
ಸದ್ಯ, ಆರೋಪಿಯನ್ನು ಬಂಧಿಸಿರುವ ಪೊಲೀಸರು ಇನ್ನಷ್ಟು ತನಿಖೆಯನ್ನು ನಡೆಸುತ್ತಿದ್ದಾರೆ.
ಇನ್ನಷ್ಟು ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

