ಗದಗ: ಲೋಕಾಯುಕ್ತ ದಾಳಿ ಮತ್ತು ವರ್ಗಾವಣೆಯ ಕಾರಣದಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಒಬ್ಬರು ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ರೋಣ ತಾಲೂಕಿನ ಅಸೂಟಿ ಮತ್ತು ಕೊತಬಾಳ ಗ್ರಾಮ ಪಂಚಾಯತಿಗಳ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಕ್ತುಂಹುಸೇನ ಕರಡಿಗುಡ್ಡ (46) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯಾಗಿದ್ದಾರೆ. ಮೂಲತಃ ಧಾರವಾಡ ಜಿಲ್ಲೆಯವರಾದ ಇವರು, ಕಳೆದ ತಿಂಗಳಷ್ಟೇ ಕೊತಬಾಳ ಪಂಚಾಯತ್‌ಗೆ ವರ್ಗಾವಣೆಯಾಗಿ ಬಂದು ಅಧಿಕಾರ ವಹಿಸಿಕೊಂಡಿದ್ದರು.

2022-23ನೇ ಸಾಲಿನಲ್ಲಿ ಇವರ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಈ ಪ್ರಕರಣದ ನಂತರ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಇತ್ತೀಚೆಗೆ ಮರುನೇಮಕ ಮಾಡಿ ಗದಗ ಜಿಲ್ಲೆಗೆ ನಿಯೋಜನೆ ಮಾಡಲಾಗಿತ್ತು. ಆದರೆ ಲೋಕಾಯುಕ್ತ ಪ್ರಕರಣ ಮತ್ತು ಪದೇ ಪದೇ ನಡೆದ ವರ್ಗಾವಣೆಯಿಂದಾಗಿ ಅವರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ:Crime: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ದೈಹಿಕ ಶಿಕ್ಷಕನಿಗೆ ಶಿಕ್ಷೆ ಪ್ರಕಟ

ಮಂಗಳವಾರ ರಾತ್ರಿ ರೋಣ ಪಟ್ಟಣದ ತಮ್ಮ ಬಾಡಿಗೆ ಮನೆಯಲ್ಲಿ ಮಕ್ತುಂಹುಸೇನ ನೇಣು ಬಿಗಿದುಕೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ಅವರು ಪತ್ನಿಯ ಕರೆಗೆ ಸ್ಪಂದಿಸಿರಲಿಲ್ಲ. ಇದರಿಂದ ಆತಂಕಗೊಂಡ ಪತ್ನಿ ಮನೆಯ ಮಾಲೀಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಮಾಲೀಕರು ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

