ಗ್ರಾಸ್ರೂಟ್ ಇನ್ನೋವೇಟರ್ ಗೌರವ: ದಕ್ಷಿಣ ಕನ್ನಡದ ಮೂವರು ಯುವ ಆವಿಷ್ಕಾರಕರನ್ನು ಅಭಿನಂದಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ: ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ (AIM) ಅಡಿಯಲ್ಲಿ ಪ್ರದಾನವಾಗುವ ಪ್ರತಿಷ್ಠಿತ ‘ಗ್ರಾಸ್ರೂಟ್ ಇನ್ನೋವೇಟರ್ ರೆಕಗ್ನಿಷನ್–2026’ ಗೌರವಕ್ಕೆ ಭಾಜನರಾದ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಯುವ ಆವಿಷ್ಕಾರಕರನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನವದೆಹಲಿಯ ತಮ್ಮ ನಿವಾಸದಲ್ಲಿ ಅಭಿನಂದಿಸಿದರು.

ಗೌರವಕ್ಕೆ ಪಾತ್ರರಾದ ಅಕ್ಷಯ್ ಮಾಶೇಲ್ಕರ್ (ಎಕ್ಸ್‌ಪರಿಮೈಂಡ್ ಲ್ಯಾಬ್ಸ್ ಪ್ರೈ. ಲಿ.), ಅನುಷಾ ಪ್ರಜ್ವಲ್ (ಮಾವೇದಾಸ್ ಫುಡ್ಸ್ ಆಂಡ್ ಸೀರಿಯಲ್ಸ್ ಪ್ರೈ. ಲಿ.) ಹಾಗೂ ರತ್ನಾಕರ ನಾಯಕ್ (ಡಬ್ಲ್ಯೂ.ಡಬ್ಲ್ಯೂ.ಆರ್. ಇನ್ನೋವೇಶನ್ಸ್ ಪ್ರೈ. ಲಿ.) ಅವರನ್ನು ಅಭಿನಂದಿಸಿದ ಸಂಸದರು, ಸ್ಥಳೀಯ ಸಮಸ್ಯೆಗಳಿಗೆ ನವೀನ ತಂತ್ರಜ್ಞಾನ ಮತ್ತು ಸಂಶೋಧನೆಗಳ ಮೂಲಕ ಪರಿಹಾರ ಕಂಡುಕೊಳ್ಳುತ್ತಿರುವ ಯುವಶಕ್ತಿಗಳೇ ದಕ್ಷಿಣ ಕನ್ನಡದ ನಿಜವಾದ ‘ಬೊಲ್ಪು’ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮೂವರು ಆವಿಷ್ಕಾರಕರು ತಮ್ಮ ಸಂಶೋಧನಾ ಪಯಣ, ತಂತ್ರಜ್ಞಾನ ಅಭಿವೃದ್ಧಿಯ ಅನುಭವ ಹಾಗೂ ಗ್ರಾಮೀಣ ಮತ್ತು ತಳಮಟ್ಟದ ಜನಜೀವನದಲ್ಲಿ ತಮ್ಮ ಆವಿಷ್ಕಾರಗಳಿಂದ ಉಂಟಾಗುತ್ತಿರುವ ಸಕಾರಾತ್ಮಕ ಬದಲಾವಣೆಗಳ ಕುರಿತು ವಿವರಿಸಿದರು.

ದೇಶದಾದ್ಯಂತ ಆಯ್ಕೆಯಾದ 26 ನವೋದ್ಯಮಿಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸ್ಥಾನ ಪಡೆದಿರುವುದು ಜಿಲ್ಲೆಯ ಹೆಮ್ಮೆ ಎಂದು ಸಂಸದರು ಹೇಳಿದರು. ಸಮಾಜದ ನೈಜ ಸಮಸ್ಯೆಗಳಿಗೆ ತಂತ್ರಜ್ಞಾನ ಮತ್ತು ನವೀನ ಆಲೋಚನೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಇನ್ನಷ್ಟು ಯೋಜನೆಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಯುವ ಉದ್ಯಮಿಗಳನ್ನು ಪ್ರೋತ್ಸಾಹಿಸಿದರು.

ಇದನ್ನೂ ಓದಿ: ‘ಪಿಎಂ ರಾಹತ್’ ಕಟ್ಟುನಿಟ್ಟಾಗಿ ಜಾರಿಗೊಳಿಸಿ; ನಿರ್ಲಕ್ಷ್ಯ ತೋರಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ಕ್ಯಾ. ಬ್ರಿಜೇಶ್ ಚೌಟ

ಕರಾವಳಿ ಭಾಗದಲ್ಲಿ ನಾವೀನ್ಯತೆ ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಕ್ಯಾ. ಬ್ರಿಜೇಶ್ ಚೌಟ, ಸ್ಥಳೀಯ ಸಂಶೋಧನೆಗಳು ಮತ್ತು ಸ್ವಾವಲಂಬನೆಯೇ ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ–2047’ ಪರಿಕಲ್ಪನೆಗೆ ಬಲವಾದ ಅಡಿಪಾಯ. ತಂತ್ರಜ್ಞಾನ, ಕೃಷಿ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ಮೂಡಿಬರುತ್ತಿರುವ ಸ್ಥಳೀಯ ಆವಿಷ್ಕಾರಗಳು ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ಶಕ್ತಿ ತುಂಬುತ್ತಿವೆ ಎಂದರು.

ದಕ್ಷಿಣ ಕನ್ನಡದ ಯುವ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ನಮ್ಮ ಜಿಲ್ಲೆಯ ಹೆಮ್ಮೆಯ ಸಂಗತಿ. ಸ್ಥಳೀಯ ಸವಾಲುಗಳಿಗೆ ಜಾಗತಿಕ ಮಟ್ಟದ ಪರಿಹಾರ ಕಂಡುಕೊಳ್ಳುವ ಕರಾವಳಿಯ ಪ್ರತಿಭೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಲು ನಾನು ಸದಾ ಬದ್ಧನಾಗಿದ್ದೇನೆ ಎಂದು ಹೇಳಿದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *