ಮಂಗಳೂರು: ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಮುಂಗಾರು ಪೂರ್ವ ಸಿದ್ಧತೆಯನ್ನು ಚುರುಕುಗೊಳಿಸಿದ್ದು, ಜಿಲ್ಲೆಯಲ್ಲಿ 92 ನೆರೆಪೀಡಿತ ಹಾಗೂ 88 ಭೂಕುಸಿತ ಅಪಾಯ ಪ್ರದೇಶಗಳನ್ನು ಗುರುತಿಸಿದೆ.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮುಂಗಾರು ಪೂರ್ವ ಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಅಪಾಯ ಪ್ರದೇಶಗಳಲ್ಲಿ ತಕ್ಷಣ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ವರ್ಷ ನೆರೆ ಮತ್ತು ಭೂಕುಸಿತ ಸಂಭವಿಸಿದ್ದ ಪ್ರದೇಶಗಳಿಗೆ ಭೇಟಿ ನೀಡಿ, ಈ ಬಾರಿ ಯಾವುದೇ ಅನಾಹುತ ಸಂಭವಿಸದಂತೆ ಅಗತ್ಯ ತಡೆ ಕ್ರಮಗಳನ್ನು ಜಾರಿಗೆ ತರಬೇಕೆಂದು ನಿರ್ದೇಶಿಸಿದರು.
ರಾಜಕಾಲುವೆಗಳ ಹೂಳು ತೆರವು ಕಾರ್ಯವನ್ನು ತ್ವರಿತಗೊಳಿಸಬೇಕೆಂದು ಸೂಚಿಸಿದ ಸಚಿವರು, ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಬಂಟ್ವಾಳದಲ್ಲಿ ಕಳ್ಳತನ: ಚಿನ್ನ, ನಗದು ಮತ್ತು ಬೆಳ್ಳಿ ಮೂರ್ತಿ ದೋಚಿ ಪರಾರಿ
ಸಭೆಯಲ್ಲಿ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎಚ್.ವಿ. ದರ್ಶನ್, ಜಿಲ್ಲೆಯಲ್ಲಿ ರಾಜಕಾಲುವೆ ಮತ್ತು ಚರಂಡಿಗಳ ಹೂಳು ತೆರವು ಕಾರ್ಯ ಭಾರಿ ಯಂತ್ರಗಳ ಮೂಲಕ ನಡೆಯುತ್ತಿದ್ದು, ಮಂಗಳೂರು ನಗರ ಭಾಗದ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು. ಸಮುದ್ರ ಕೊರೆತಕ್ಕೆ ಒಳಪಡುವ ಎಂಟು ಅಪಾಯ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಪಾಯ ತಗ್ಗಿಸಲು ತಡೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ 24×7 ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ. ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಈಗಾಗಲೇ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ (NDRF) ತಂಡ ಮೇ ಅಂತ್ಯದೊಳಗೆ ಜಿಲ್ಲೆಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಗುರುತಿಸಲಾದ 180 ಅಪಾಯ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತಿದೆ ಎಂದರು.
ಗುರುತಿಸಲಾದ ಅಪಾಯ ಪ್ರದೇಶಗಳು
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ (ನೆರೆಪೀಡಿತ):
ಕಸಬಾ ಬೆಂಗ್ರೆ, ಪಾಂಡೇಶ್ವರ ರೈಲ್ವೆ ಗೇಟ್ ಸಮೀಪ, ಕೊಟ್ಟಾರ ಚೌಕಿ, ಪಂಪ್‌ವೆಲ್ ಜಂಕ್ಷನ್, ಪಡೀಲ್ ಹೆದ್ದಾರಿ, ಜಪ್ಪಿನಮೊಗರು, ಅಲಕೆ, ಮಲೆಮಾರ್, ಮಲಾಡಿ ಕೋರ್ಟ್, ಅತ್ತಾವರ, ಸುರತ್ಕಲ್ ಬೈಲರ್ ಪ್ರದೇಶ, ಹೊಯಿಗೆಬಜಾರ್, ವಳಚ್ಚಿಲ್, ಬಜಾಲ್ ಪಡು, ಕುಳೂರು ಜಂಕ್ಷನ್, ಕಣ್ಣೂರು ಮಸೀದಿ ಸಮೀಪ, ಮೂಡುಶೆಡ್ಡೆ, ಪಡುಶೆಡ್ಡೆ ಮತ್ತು ಬಜಾಲ್.
ಮಂಗಳೂರು ತಾಲೂಕು (ನೆರೆ ಮತ್ತು ಭೂಕುಸಿತ ಅಪಾಯ):
ಅಡ್ಡೂರು, ಮುಲೂರು, ಮಲ್ಲೂರು, ಅಡ್ಯಾರ್, ಅರ್ಕುಳ, ತೆಂಕುಳಿಪಾಡಿ, ಮೊಗರು, ಬಡಗೊಳಿಪಾಡಿ, ಉಳೈಬೆಟ್ಟು, ಮಳವೂರು, ಕೆಂಜಾರು, ಚೆಲೈರು, ಮಧ್ಯ, ಸುರಿಂಜೆ ಮತ್ತು ದೆಲಂತಬೆಟ್ಟು.
ಮುಲ್ಕಿ ತಾಲೂಕು (ನೆರೆಪೀಡಿತ):
ಬಾಲ್ಕುಂಜೆ, ಕಾರ್ನಿರೆ, ಅಧಿಕಾರಿಬೆಟ್ಟು, ಎಲಿಂಜೆ, ಉಳೇಪಾಡಿ, ಕಿಲೆಂಜೂರು, ನಡುಗೋಡು, ಕಿಲ್ಪಾಡಿ, ಹಳೆಯಂಗಡಿ, ಪಾವಂಜೆ, ಪಂಜ, ಕೊಯಿಕುಡೆ, ಬಪ್ಪನಾಡು, ಮನಂಪಾಡಿ ಮತ್ತು ಪಡುಪಣಂಬೂರು. ಇಲ್ಲಿ ಭೂಕುಸಿತ ಅಪಾಯ ಪ್ರದೇಶಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ: ಸ್ಕಾರ್ಪಿಯೋ ಸತೀಶ್ ನೆಲ್ಯಾಡಿಯಲ್ಲಿ ಅರೆಸ್ಟ್, ಕಿಶೋರ್ ಮೈಸೂರಿನಲ್ಲಿ ಬಂಧನ
ಉಳ್ಳಾಲ ತಾಲೂಕು:
ಪಾವೂರು, ಉಳ್ಳಾಲ ಮತ್ತು ಸೋಮೇಶ್ವರ ನೆರೆಪೀಡಿತ ಪ್ರದೇಶಗಳಾಗಿದ್ದು, ಪರ್ಮನ್ನೂರು, ಉಳ್ಳಾಲ, ಸೋಮೇಶ್ವರ, ಮಂಜನಾಡಿ, ಇರಾ, ಬಾಳೆಪುಣಿ, ಕೊಣಾಜೆ, ಮುನ್ನೂರು, ಬೆಲ್ಮ, ಹರೇಕಳ, ಬೊಳಿಯಾರ್, ಫಾಜಿರ್, ಸಜಿಪ ನಡು ಮತ್ತು ಕುರ್ನಾಡು ಭೂಕುಸಿತ ಅಪಾಯ ಪ್ರದೇಶಗಳಾಗಿವೆ.
ಮೂಡಬಿದ್ರೆ ತಾಲೂಕು (ಭೂಕುಸಿತ ಅಪಾಯ):
ಬೆಳುವಾಯಿ, ಶಿರ್ತಾಡಿ, ಪುತ್ತಿಗೆ, ನಿಡ್ಡೋಡಿ, ಬಡಗ ಮಿಜಾರ್ ಮತ್ತು ಹೊಸಬೆಟ್ಟು ಪ್ರದೇಶಗಳನ್ನು ಭೂಕುಸಿತ ಅಪಾಯ ಪ್ರದೇಶಗಳೆಂದು ಗುರುತಿಸಲಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ರಾಜು ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಯ ಜೊತೆಗೆ ಮುಂಗಾರು ಪೂರ್ವ ಎಚ್ಚರಿಕೆ ಮತ್ತು ಕಟ್ಟಡಗಳ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ ನರ್ವಡೆ ನಾಯಕ್ ಖರ್ಬಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಡಿಸಿಎಫ್ ರವಿಶಂಕರ್, ಮಂಗಳೂರು ಉಪವಿಭಾಗಾಧಿಕಾರಿ ಮೀನಾಕ್ಷಿ ಆರ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


