ಬೆಂಗಳೂರು: ವೇಗದ ನಗರ ಜೀವನ, ನಿರಂತರ ಒತ್ತಡ, ನಿದ್ರಾಹೀನತೆ ಮತ್ತು ಮಾನಸಿಕ ದಣಿವು ಮಾನವರ ಮೆದುಳಿನ ಕಾರ್ಯವೈಖರಿಯನ್ನೇ ಬದಲಾಯಿಸಿ ದೀರ್ಘಕಾಲದ ನೋವಿಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ಅಂಶ ಇದೀಗ ವೈದ್ಯಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಿಶೇಷವಾಗಿ ಫೈಬ್ರೊಮೈಯಾಲ್ಜಿಯಾ (Fibromyalgia) ಎನ್ನುವ ಸ್ಥಿತಿ ನಗರ ಪ್ರದೇಶದ ಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಇದು ಕೇವಲ ದೈಹಿಕ ಸಮಸ್ಯೆಯಲ್ಲ; ಮೆದುಳು ಮತ್ತು ನರಮಂಡಲದ ಪ್ರತಿಕ್ರಿಯೆಯೊಂದಿಗಿನ ಗಂಭೀರ ಆರೋಗ್ಯ ಸ್ಥಿತಿ ಎಂದು ತಜ್ಞರು ಎಚ್ಚರಿಸಿದ್ದಾರೆ.
ಫೈಬ್ರೊಮೈಯಾಲ್ಜಿಯಾ ಎನ್ನುವುದು ದೇಹದಾದ್ಯಂತ ವ್ಯಾಪಕವಾದ ನೋವು, ತೀವ್ರ ದಣಿವು, ನಿದ್ರಾ ವ್ಯತ್ಯಯ, ನೆನಪಿನ ಸಮಸ್ಯೆ ಹಾಗೂ ಮನೋಭಾವದ ಅಸ್ಥಿರತೆ ಉಂಟುಮಾಡುವ ದೀರ್ಘಕಾಲದ ಆರೋಗ್ಯ ಸಮಸ್ಯೆ. ಅನೇಕ ರೋಗಿಗಳು ದೇಹವೇ ಸದಾ ನೋವಿನಿಂದ ತುಂಬಿರುವಂತೆ ಅನುಭವವಾಗುತ್ತದೆ” ಎಂದು ವಿವರಿಸುತ್ತಾರೆ. ಕೆಲವರಿಗೆ ತಲೆನೋವು, ಕುತ್ತಿಗೆ ಮತ್ತು ಬೆನ್ನುನೋವು, ಕೈಕಾಲುಗಳಲ್ಲಿ ಸುಡುವ ಅನುಭವ, ಚಳಿ ಅಥವಾ ಬೆಳಕಿನ ಮೇಲಿನ ಅತಿಸೂಕ್ಷ್ಮ ಪ್ರತಿಕ್ರಿಯೆಗಳೂ ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ ದಕ್ಷಿಣ ಕನ್ನಡದಲ್ಲಿ ‘ಗೃಹಲಕ್ಷ್ಮಿ’ ಎಡವಟ್ಟು: ಮೃತಪಟ್ಟವರ ಖಾತೆಗೆ ಜಮೆಯಾಯ್ತು 22 ಕೋಟಿ ರೂಪಾಯಿ!
ತಜ್ಞರ ಪ್ರಕಾರ, ಈ ಸಮಸ್ಯೆಯ ಮೂಲ ಕಾರಣ ದೇಹದಲ್ಲಲ್ಲ, ಮೆದುಳಿನ “ಪೇನ್ ಪ್ರೊಸೆಸಿಂಗ್ ಸಿಸ್ಟಮ್ ನಲ್ಲಿ ಇರಬಹುದು. ಸಾಮಾನ್ಯವಾಗಿ ನೋವನ್ನು ನಿಯಂತ್ರಿಸಬೇಕಾದ ಮೆದುಳು ಮತ್ತು ನರಮಂಡಲವು ಫೈಬ್ರೊಮೈಯಾಲ್ಜಿಯಾ ಇರುವವರಲ್ಲಿ ಅತಿಯಾಗಿ ಪ್ರತಿಕ್ರಿಯಿಸಿ ಸಣ್ಣ ಸಂವೇದನೆಗಳನ್ನೂ ಗಂಭೀರ ನೋವಿನಂತೆ ಅನುಭವಿಸುವಂತೆ ಮಾಡುತ್ತದೆ. ಕೆಲವು ಅಧ್ಯಯನಗಳು ದೀರ್ಘಕಾಲದ ನೋವು ಮೆದುಳಿನ ರಚನೆ ಹಾಗೂ ಕಾರ್ಯವೈಖರಿಯನ್ನೇ ಬದಲಾಯಿಸಬಹುದು ಎಂದು ಸೂಚಿಸಿವೆ.
ನಗರ ಜೀವನದ ಒತ್ತಡ, ನಿರಂತರ ಕೆಲಸದ ಒತ್ತಾಯ, ಕಡಿಮೆ ನಿದ್ರೆ, ಆತಂಕ ಮತ್ತು ಸಾಮಾಜಿಕ ಏಕಾಂತತೆಯಂತಹ ಅಂಶಗಳು ಈ ಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ. ವಿಶೇಷವಾಗಿ ಐಟಿ ಉದ್ಯೋಗಿಗಳು, ಕಾರ್ಪೊರೇಟ್ ಕ್ಷೇತ್ರದ ನೌಕರರು ಹಾಗೂ ನಿರಂತರ ಮಾನಸಿಕ ಒತ್ತಡ ಅನುಭವಿಸುವವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ ನೀಟ್ ಪೇಪರ್ ಲೀಕ್ ಪ್ರಕರಣದಲ್ಲಿ ಮಹಿಳೆ ಬಂಧನ
ಫೈಬ್ರೊಮೈಯಾಲ್ಜಿಯಾ ಪತ್ತೆಹಚ್ಚುವುದು ಸುಲಭವಲ್ಲ. ಇದಕ್ಕಾಗಿ ನಿರ್ದಿಷ್ಟ ರಕ್ತಪರೀಕ್ಷೆ ಅಥವಾ ಸ್ಕ್ಯಾನ್ ಇಲ್ಲದ ಕಾರಣ ಅನೇಕ ಬಾರಿ ಇದನ್ನು ತಪ್ಪಾಗಿ ಅರ್ಥೈಸಲಾಗುತ್ತದೆ. ಕೆಲ ರೋಗಿಗಳಿಗೆ ಇದು ಕೇವಲ ಮನಸ್ಸಿನ ಸಮಸ್ಯೆ ಎಂದು ಹೇಳಲಾಗುವುದೂ ಇದೆ. ಆದರೆ ವೈದ್ಯಕೀಯ ತಜ್ಞರು ಇದು ನಿಜವಾದ ನರಮಂಡಲ ಸಂಬಂಧಿತ ದೀರ್ಘಕಾಲದ ನೋವಿನ ಸ್ಥಿತಿ ಎಂದು ಸ್ಪಷ್ಟಪಡಿಸುತ್ತಿದ್ದಾರೆ.
ಫೈಬ್ರೊಮೈಯಾಲ್ಜಿಯಾಗೆ ಸಂಪೂರ್ಣ ಗುಣಮುಖ ಮಾಡುವ ನಿರ್ದಿಷ್ಟ ಔಷಧಿ ಇಲ್ಲ. ಆದರೆ ನಿಯಮಿತ ವ್ಯಾಯಾಮ, ಯೋಗ, ಒತ್ತಡ ನಿಯಂತ್ರಣ, ಉತ್ತಮ ನಿದ್ರೆ, ಕೌನ್ಸೆಲಿಂಗ್ ಹಾಗೂ ಕೆಲವು ಔಷಧಿಗಳ ಮೂಲಕ ಲಕ್ಷಣಗಳನ್ನು ನಿಯಂತ್ರಿಸಬಹುದು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ. ವಿಶೇಷವಾಗಿ ಕಾಗ್ನೇಟಿವ್ ಬಿಹೇವಿಯರ್ ತೆರಪಿ (Cognitive Behaviour Therapy ), ಧ್ಯಾನ ಮತ್ತು ಲಘು ವ್ಯಾಯಾಮಗಳು ರೋಗಿಗಳಲ್ಲಿ ಉತ್ತಮ ಪರಿಣಾಮ ತೋರಿಸುತ್ತಿವೆ ಎನ್ನಲಾಗಿದೆ.
ಆರೋಗ್ಯದ ಸುದ್ದಿ ಮತ್ತಷ್ಟೂ ಓದಲು ಇಲ್ಲಿ ಕ್ಲಿಕ್ ಮಾಡಿ


