ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ಹಾಗೂ ಅತ್ಯಂತ ಪ್ರಭಾವಶಾಲಿ ನಿರ್ಮಾಪಕ ಕೆ. ರಾಜನ್ (85) ಅವರು ಚೆನ್ನೈನ ಅಡ್ಯಾರ್ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದಾ ನೇರ ನಡೆ-ನುಡಿಯ ಮೂಲಕ ಇಡೀ ಕಾಲಿವುಡ್‌ನಲ್ಲಿ ಮನ್ನಣೆ ಗಳಿಸಿದ್ದ ಹಿರಿಯ ಚಿತ್ರವ್ಯಕ್ತಿತ್ವದ ಈ ಹಠಾತ್ ದುರಂತ ಅಂತ್ಯ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ತೀವ್ರ ದಿಗ್ಭ್ರಮೆ ಹಾಗೂ ಶೋಕ ಸಾಗರದಲ್ಲಿ ಮುಳುಗಿಸಿದೆ.
ಭಾನುವಾರ ಸಂಜೆ ತಮ್ಮ ಚಾಲಕ ಧನಶೇಖರ್ ಅವರೊಂದಿಗೆ ಕಾರಿನಲ್ಲಿ ಹೊರಟಿದ್ದ ಕೆ. ರಾಜನ್ ಅವರು, ಸಂಜೆ ಸುಮಾರು 4:30ರ ಅವಧಿಯಲ್ಲಿ ಅಡ್ಯಾರ್‌ನ ‘ತಿರು-ವಿ-ಕ’ ಬ್ರಿಡ್ಜ್ (Thiru-Vi-Ka Bridge) ತಲುಪುತ್ತಿದ್ದಂತೆ ಸಣ್ಣದಾಗಿ ವಾಕ್ ಮಾಡುವುದಾಗಿ ಹೇಳಿ ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ. ಕಾರಿನಿಂದ ಇಳಿದು ಬ್ರಿಡ್ಜ್ ಮೇಲೆ ಸ್ವಲ್ಪ ದೂರ ಹೆಜ್ಜೆ ಹಾಕಿದ ಅವರು, ಇದ್ದಕ್ಕಿದ್ದಂತೆ ನದಿಗೆ ಜಿಗಿದಿದ್ದಾರೆ. ಇದನ್ನು ಕಂಡು ದಾರಿಹೋಕರು ತಕ್ಷಣವೇ ಚಾಲಕನಿಗೆ ತಿಳಿಸಿದ್ದು, ಬಳಿಕ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರು ಹಾಕಿದ ನಟ ರವಿ ಮೋಹನ್: ;ವಿಚ್ಛೇದನ ಸಿಗುವವರೆಗೂ ಸಿನಿಮಾ ಮಾಡಲ್ಲ, ನನ್ನ ಜೀವಕ್ಕೆ ಅವರೇ ಹೊಣೆ!
ಸ್ಥಳಕ್ಕೆ ಧಾವಿಸಿದ ಸೈದಾಪೇಟೆ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕೆ. ರಾಜನ್ ಅವರ ಮೃತದೇಹವನ್ನು ಹೊರತೆಗೆದಿದ್ದಾರೆ. ಸದ್ಯ ಮೃತದೇಹವನ್ನು ರಾಯಪೇಟೆಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಅವರು ಕಳೆದ ಕೆಲವು ದಿನಗಳಿಂದ ಕೌಟುಂಬಿಕ ಸಮಸ್ಯೆಯಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. 1980ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ರಾಜನ್ ಅವರು ‘ಬ್ರಹ್ಮಚಾರಿಗಳ್’, ‘ಡಬಲ್ಸ್’, ‘ಅವಳ್ ಪಾವಂ’ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿದ್ದರು ಹಾಗೂ ನಟಿಸಿದ್ದರು. ಸಣ್ಣ ಬಜೆಟ್ ಚಿತ್ರಗಳ ಪರ ಮತ್ತು ದೊಡ್ಡ ನಟರ ಅತಿಯಾದ ಸಂಭಾವನೆ ವಿರುದ್ಧ ಅವರು ಧ್ವನಿ ಎತ್ತುತ್ತಿದ್ದರು. ಅವರ ಸಾವಿಗೆ ನಟಿ ಖುಷ್ಬೂ ಸುಂದರ್, ನಟ ವಿಶಾಲ್, ಶರತ್ ಕುಮಾರ್ ಸೇರಿದಂತೆ ತಮಿಳುನಾಡಿನ ಪ್ರಮುಖ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


