ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮನವಿಗೆ ತಕ್ಷಣ ಸ್ಪಂದಿಸಿದ ಡಿಸಿಎಂ!: ಕಡಬ ಕಿರು ಅಣೆಕಟ್ಟು, ಕುಕ್ಕುಂಬಳ ಸೇತುವೆ ಕಾಮಗಾರಿಗೆ ವೇಗ ನೀಡಲು KNNL ಅಧಿಕಾರಿಗಳಿಗೆ ಖಡಕ್ ಸೂಚನೆ!

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಮತ್ತೊಮ್ಮೆ ದೆಹಲಿ ಹಾಗೂ ಬೆಂಗಳೂರು ಮಟ್ಟದಲ್ಲಿ ಭಾರಿ ಕಸರತ್ತು ಆರಂಭಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ರಾಜ್ಯದ ಉಪಮುಖ್ಯಮಂತ್ರಿ (DCM) ಹಾಗೂ ಜಲಸಂಪನ್ಮೂಲ ಸಚಿವರನ್ನು ಖುದ್ದಾಗಿ ಭೇಟಿಯಾದ ಅವರು, ಸುಳ್ಯ ಮತ್ತು ಕಡಬ ತಾಲೂಕಿನ ನೆನೆಗುದಿಗೆ ಬಿದ್ದಿರುವ ಪ್ರಮುಖ ಮೂಲಸೌಕರ್ಯ ಮತ್ತು ನೀರಾವರಿ ಯೋಜನೆಗಳ ಅನುದಾನ ಬಿಡುಗಡೆಗೆ ಮತ್ತೊಮ್ಮೆ ನೆನಪೋಲೆ ಸಲ್ಲಿಸಿ ಒತ್ತಾಯಿಸಿದರು.

ಕಳೆದ ವರ್ಷ ಮೇ ತಿಂಗಳಿನಲ್ಲಿ ಕಡಬ ತಾಲೂಕಿನ ಕೆನ್ಯ ಗ್ರಾಮದ ಮಜ್ಜಾರು-ಕಡಾವು ಎಂಬಲ್ಲಿ ಅತ್ಯಗತ್ಯವಾಗಿರುವ ಕಿರು ಅಣೆಕಟ್ಟು (Vented Dam) ಮತ್ತು ಸಂಪರ್ಕ ಸೇತುವೆ ನಿರ್ಮಾಣಕ್ಕೆ ಶಾಸಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಬೆನ್ನಲ್ಲೇ ವರಾಹಿ ಮತ್ತು ಬೃಹತ್ ನೀರಾವರಿ ಯೋಜನೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಮಗ್ರ ಯೋಜನಾ ವರದಿ (DPR) ಸಿದ್ಧಪಡಿಸಿದ್ದರು. ಆದರೆ, ತದನಂತರ ಈ ಯೋಜನೆ ಯಾವುದೇ ಪ್ರಗತಿ ಕಾಣದೆ ಆಡಳಿತಾತ್ಮಕವಾಗಿ ನೆನೆಗುದಿಗೆ ಬಿದ್ದಿತ್ತು. ಇದರ ಬಗ್ಗೆ ಉಪಮುಖ್ಯಮಂತ್ರಿಗಳ ಗಮನ ಸೆಳೆದ ಶಾಸಕರು, ತಕ್ಷಣವೇ ಇದಕ್ಕೆ ಹಣಕಾಸು ಒಪ್ಪಿಗೆ ನೀಡಿ ಕೆಲಸ ಆರಂಭಿಸಬೇಕು ಎಂದು ವಿನಂತಿಸಿದರು.

ಇದನ್ನೂ ಓದಿ: ತೆರಿಗೆ ಸಂಗ್ರಹದಲ್ಲಿ ಕಡಬ ತಾಲೂಕು ರಾಜ್ಯಕ್ಕೇ ನಂಬರ್ 1: ಶೇ. 103ರಷ್ಟು ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದ ಹೊಸ ತಾಲೂಕು!

ಕುಕ್ಕುಂಬಳ ಸೇತುವೆ ಟೆಂಡರ್ ಪ್ರಕ್ರಿಯೆ ಚುರುಕುಗೊಳಿಸಲು ಆಗ್ರಹ:

ಇದೇ ವೇಳೆ ಸುಳ್ಯದ ಆಲೆಟ್ಟಿ ಗ್ರಾಮದ ಕುಕ್ಕುಂಬಳ ಸೇತುವೆ ಕಾಮಗಾರಿಯ ಬಗ್ಗೆಯೂ ಶಾಸಕರು ಪ್ರಸ್ತಾಪಿಸಿದರು. ಈ ಸೇತುವೆಗೆ ಈಗಾಗಲೇ ಅನುದಾನ ಮಂಜೂರಾಗಿದ್ದರೂ, ಪ್ರಸ್ತುತ ಪ್ರಕ್ರಿಯೆಗಳು ಇನ್ನೂ ಕೇವಲ ಟೆಂಡರ್ ಹಂತದಲ್ಲೇ ಉಳಿದುಕೊಂಡಿವೆ. ಮಳೆಗಾಲ ಆರಂಭವಾಗುತ್ತಿರುವುದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆಗಳನ್ನು ಮುಗಿಸಿ, ಸ್ಥಳದಲ್ಲಿ ಭೌತಿಕ ಕಾಮಗಾರಿ ಆರಂಭಿಸುವಂತೆ ಶಾಸಕಿ ಭಾಗೀರಥಿ ಮುರುಳ್ಯ ಒತ್ತಾಯಿಸಿದರು.

KNNL ಅಧಿಕಾರಿಗಳಿಗೆ ತಕ್ಷಣದ ಆದೇಶ ನೀಡಿದ ಡಿಸಿಎಂ:

ಶಾಸಕರ ತಾರ್ಕಿಕ ಮತ್ತು ಸುದೀರ್ಘ ಮನವಿಗೆ ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ ಉಪಮುಖ್ಯಮಂತ್ರಿಗಳು, ಸ್ಥಳದಲ್ಲೇ ಇದ್ದ ಕರ್ನಾಟಕ ನೀರಾವರಿ ನಿಗಮ ನಿಯಮಿತದ (KNNL) ಉನ್ನತ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಈ ಎರಡು ಪ್ರಮುಖ ಯೋಜನೆಗಳ ಕಡತಗಳನ್ನು ತಕ್ಷಣವೇ ವಿಲೇವಾರಿ ಮಾಡಿ, ಕೆಲಸ ಕಾರ್ಯಗಳನ್ನು ಶೀಘ್ರವಾಗಿ ಮುಗಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಡಿಸಿಎಂ ಅವರ ಈ ತ್ವರಿತ ಕ್ರಮಕ್ಕೆ ಸುಳ್ಯ ಶಾಸಕರು ಧನ್ಯವಾದ ಸಮರ್ಪಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು