ಎಂಜಿನಿಯರಿಂಗ್ ಕಾಲೇಜುಗಳಿಗೆ ಹೊಸ ನಿಯಮ: ಕಂಪ್ಯೂಟರ್ ಸೈನ್ಸ್‌ಗೆ 900 ಸೀಟು ಮಿತಿ

engineering college computer science seat limit karnataka

ಮಂಗಳೂರು: ರಾಜ್ಯದಲ್ಲಿನ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್ ಹಾಗೂ ಸಂಬಂಧಿತ ಕೋರ್ಸ್‌ಗಳ ವಿದ್ಯಾರ್ಥಿ ಪ್ರವೇಶಕ್ಕೆ ಮಿತಿ ವಿಧಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಗರಿಷ್ಠ 900 ಸೀಟುಗಳಿಗೆ ಮಾತ್ರ ಅವಕಾಶ ನೀಡುವ ಹೊಸ ನಿಯಮ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.

ಕಂಪ್ಯೂಟರ್ ಸೈನ್ಸ್‌ ಸಂಬಂಧಿತ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಪರಿಣಾಮ ಸಿವಿಲ್, ಮೆಕ್ಯಾನಿಕಲ್ ಹಾಗೂ ಆಟೋಮೊಬೈಲ್ ಎಂಜಿನಿಯರಿಂಗ್‌‌ನಂತಹ ಮೂಲಭೂತ ವಿಭಾಗಗಳಲ್ಲಿ ಪ್ರವೇಶ ಸಂಖ್ಯೆ ಗಣನೀಯವಾಗಿ ಕುಸಿದಿದೆ ಎಂದು ಸಚಿವರು ಹೇಳಿದ್ದಾರೆ. ಉತ್ತಮ ವೇತನದ ನಿರೀಕ್ಷೆಯಿಂದ ವಿದ್ಯಾರ್ಥಿಗಳು ಐಟಿ ಮತ್ತು ಕಂಪ್ಯೂಟರ್ ಸೈನ್ಸ್‌ ಕೋರ್ಸ್‌ಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಅನೇಕ ಕಾಲೇಜುಗಳು ಒಂದೇ ಮಾದರಿಯ ಪಠ್ಯಕ್ರಮಗಳೊಂದಿಗೆ ಸಾವಿರಾರು ಸೀಟುಗಳನ್ನು ಸೃಷ್ಟಿಸಿರುವುದಾಗಿ ಅವರು ಅಭಿಪ್ರಾಯಪಟ್ಟರು.

ಈ ಅಸಮತೋಲನ ನಿವಾರಣೆಗಾಗಿ ಐಐಐಟಿ-ಬೆಂಗಳೂರು ಮಾಜಿ ನಿರ್ದೇಶಕ ಪ್ರೊ. ಸೌಮ್ಯನಾರಾಯಣನ್ ಸದಗೋಪನ್ ನೇತೃತ್ವದಲ್ಲಿ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯ ಶಿಫಾರಸಿನಂತೆ, ಹೊಸ ಎಂಜಿನಿಯರಿಂಗ್ ಕಾಲೇಜುಗಳು ಪ್ರತಿ ವಿಶೇಷ ವಿಭಾಗದಲ್ಲಿ ಆರಂಭಿಕ ಹಂತದಲ್ಲಿ 60 ವಿದ್ಯಾರ್ಥಿಗಳೊಂದಿಗೆ ಕೋರ್ಸ್ ಆರಂಭಿಸಬಹುದು.

ಇದನ್ನೂ ಓದಿ: ಮಂಗಳೂರು: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಮುನ್ಸೂಚನೆ!

ಕಂಪ್ಯೂಟರ್ ಸೈನ್ಸ್‌ಗೆ ಸಂಬಂಧಿಸಿದ ವಿಭಾಗಗಳಲ್ಲಿ ನಾಲ್ಕು ವರ್ಷಗಳಲ್ಲಿ ಗರಿಷ್ಠ 180 ವಿದ್ಯಾರ್ಥಿಗಳವರೆಗೆ ಸೀಟು ಹೆಚ್ಚಿಸಲು ಅವಕಾಶವಿದ್ದು, ಒಟ್ಟು ಐದು ಕಂಪ್ಯೂಟರ್ ಸೈನ್ಸ್‌ ಸಂಬಂಧಿತ ಕೋರ್ಸ್‌ಗಳನ್ನು ಮಾತ್ರ ನಡೆಸಲು ಅನುಮತಿ ನೀಡಲಾಗುತ್ತದೆ. ಎಲ್ಲಾ ಕೋರ್ಸ್‌ಗಳನ್ನು ಸೇರಿಸಿ ಒಟ್ಟು 900 ಸೀಟುಗಳ ಮಿತಿ ಇರಲಿದೆ.

ನಾಲ್ಕು ವರ್ಷಗಳ ಬಳಿಕ ಪ್ರತಿ ಕೋರ್ಸ್‌ನಲ್ಲಿ 180ಕ್ಕೂ ಹೆಚ್ಚು ಸೀಟು ಹೆಚ್ಚಿಸಬೇಕಾದರೆ ನ್ಯಾಷನಲ್ ಬೋರ್ಡ್ ಆಫ್ ಅಕ್ರಿಡಿಟೇಶನ್ (NBA) ಮಾನ್ಯತೆ ಕಡ್ಡಾಯವಾಗಲಿದೆ. NBA ಮಾನ್ಯತೆ ಪಡೆದ ಬಳಿಕ ವರ್ಷಕ್ಕೆ 60 ಸೀಟುಗಳನ್ನು ಹೆಚ್ಚಿಸಿಕೊಂಡು ಒಂದು ಕೋರ್ಸ್‌ಗೆ ಗರಿಷ್ಠ 300 ಸೀಟುಗಳವರೆಗೆ ಅವಕಾಶ ದೊರೆಯಲಿದೆ.

ಈಗಾಗಲೇ ಹೆಚ್ಚಿನ ವಿದ್ಯಾರ್ಥಿ ಪ್ರವೇಶ ಹೊಂದಿರುವ ಕಾಲೇಜುಗಳಿಗೆ ಹೊಸ ನಿಯಮ ಪಾಲನೆಗಾಗಿ ಪರಿವರ್ತನಾ ಅವಧಿ ನೀಡಲಾಗುತ್ತದೆ. ಎರಡು ವರ್ಷಗಳೊಳಗೆ NBA ಮಾನ್ಯತೆ ಪಡೆಯದಿದ್ದರೆ, ಸರ್ಕಾರ ಅನುಮೋದಿತ ಸೀಟುಗಳನ್ನು ಕಡಿತಗೊಳಿಸುವ ಎಚ್ಚರಿಕೆ ನೀಡಿದೆ.

ಇದೇ ವೇಳೆ, ಕೃತಕ ಬುದ್ಧಿಮತ್ತೆ (AI) ಹಾಗೂ ಇತರ ಉದಯೋನ್ಮುಖ ತಂತ್ರಜ್ಞಾನಗಳನ್ನು ಸಾಂಪ್ರದಾಯಿಕ ಎಂಜಿನಿಯರಿಂಗ್ ವಿಭಾಗಗಳ ಪಠ್ಯಕ್ರಮಕ್ಕೆ ಸೇರಿಸುವಂತೆ ಸಮಿತಿ ಶಿಫಾರಸು ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು