ಮಂಗಳೂರು: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಮುನ್ಸೂಚನೆ!

ಮಂಗಳೂರು: ಕರಾವಳಿಯ ಜನಜೀವನದ ಪ್ರಮುಖ ಅಂಗವಾಗಿರುವ ಖಾಸಗಿ ಬಸ್‌ಗಳ ಪ್ರಯಾಣ ದರ ಪರಿಷ್ಕರಣೆ (ದರ ಏರಿಕೆ) ಸದ್ಯದಲ್ಲೇ ಅನಿವಾರ್ಯವಾಗಲಿದೆ ಎಂದು ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘ ಸ್ಪಷ್ಟಪಡಿಸಿದೆ. ನಿರಂತರ ಡೀಸೆಲ್ ಬೆಲೆ ಏರಿಕೆ, ಬಿಡಿಭಾಗಗಳ ದುಬಾರಿ ವೆಚ್ಚ, ತೆರಿಗೆ ಮತ್ತು ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಳದಿಂದಾಗಿ ಬಸ್ ನಿರ್ವಹಣೆ ಕಷ್ಟಕರವಾಗಿದೆ. ಆದರೆ, ತಕ್ಷಣವೇ ದರ ಏರಿಸದೆ ಮುಂದಿನ ಒಂದು ತಿಂಗಳ ಕಾಲ ವೆಚ್ಚಗಳ ಏರಿಳಿತವನ್ನು ಸೂಕ್ಷ್ಮವಾಗಿ ಗಮನಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಘ ತಿಳಿಸಿದೆ.

ಮಂಗಳೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಅಜೀಜ್ ಪರ್ತಿಪ್ಪಾಡಿ ಅವರು, “ಕಳೆದ ಐದು ವರ್ಷಗಳಿಂದ ಬಸ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ಹಣಕಾಸಿನ ತೀವ್ರ ಒತ್ತಡ ಇರುವುದರಿಂದ ದರ ಪರಿಷ್ಕರಣೆ ಅನಿವಾರ್ಯವಾಗಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಡೀಸೆಲ್ ಬೆಲೆ ಮತ್ತು ಒಟ್ಟಾರೆ ನಿರ್ವಹಣಾ ವೆಚ್ಚಗಳ ಬಗ್ಗೆ ವೈಜ್ಞಾನಿಕ ಮೌಲ್ಯಮಾಪನ ನಡೆಸಿ, ಆ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು” ಎಂದರು. ಇದೇ ವೇಳೆ, ಭಾರಿ ಮಳೆಯಲ್ಲೂ ಸುರಕ್ಷಿತವಾಗಿ ಬಸ್ ಚಲಾಯಿಸುವಂತೆ ಮತ್ತು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಚಾಲಕ-ನಿರ್ವಾಹಕರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಮಂಗಳೂರು ನಗರದ ಪ್ರಮುಖ ರಸ್ತೆಗಳ ದುಸ್ಥಿತಿ ಮತ್ತು ಟ್ರಾಫಿಕ್ ಜಾಮ್‌ನಿಂದಾಗಿ ಬಸ್ ವೇಳಾಪಟ್ಟಿಯನ್ನು ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ ಎಂದು ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಬಿಜೈ ಕೆಎಸ್‌ಆರ್‌ಟಿಸಿ ಜಂಕ್ಷನ್‌ನಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ತುರ್ತು ಕ್ರಮಕ್ಕೆ ಒತ್ತಾಯಿಸಿದೆ. ಇದರೊಂದಿಗೆ ಕೆಪಿಟಿ-ನಂತೂರು, ಕುಂಟಿಕಾನ, ಲಾಲ್‌ಬಾಗ್, ಪಿವಿಎಸ್ ಮತ್ತು ಬಂಟ್ಸ್ ಹಾಸ್ಟೆಲ್ ಜಂಕ್ಷನ್‌ಗಳಲ್ಲಿ ಉಂಟಾಗುತ್ತಿರುವ ನಿರಂತರ ಸಂಚಾರ ದಟ್ಟಣೆಗೆ ಶೀಘ್ರ ಪರಿಹಾರ ಕಲ್ಪಿಸುವಂತೆ ಸರ್ಕಾರವನ್ನು ಆಗ್ರಹಿಸಿದೆ.

ಇದನ್ನೂ ಓದಿ: ಮಂಗಳೂರು: ಬೈಕಂಪಾಡಿ, ಕೂಳೂರು ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ ಕೇಂದ್ರದಿಂದ 11.63 ಕೋಟಿ ರೂ. ಮಂಜೂರು; ಸಂಸದ ಕ್ಯಾ. ಬ್ರಿಜೇಶ್ ಚೌಟ

ಸ್ಟೇಟ್ ಬ್ಯಾಂಕ್ ನಿಲ್ದಾಣದಲ್ಲಿ ಪೊಲೀಸ್ ಚೌಕಿಗೆ ಬೇಡಿಕೆ:

ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದ ಸುತ್ತಮುತ್ತ ಸಂಜೆ ವೇಳೆಯಲ್ಲಿ ಸಮಾಜ ವಿರೋಧಿ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಸಂಘ ಗಂಭೀರ ಆರೋಪ ಮಾಡಿದೆ. ಕತ್ತಲಾದ ನಂತರ ಬಸ್‌ಗಳಿಗಾಗಿ ಕಾಯುವ ಮಹಿಳಾ ಪ್ರಯಾಣಿಕರಲ್ಲಿ ಅಸುರಕ್ಷತೆ ಮೂಡುತ್ತಿದ್ದು, ಈ ಜನನಿಬಿಡ ನಿಲ್ದಾಣದಲ್ಲಿ ತಕ್ಷಣವೇ ಪ್ರತ್ಯೇಕ ಪೊಲೀಸ್ ಚೌಕಿ ಸ್ಥಾಪಿಸಬೇಕು ಎಂದು ಸಂಘ ಕಟ್ಟುನಿಟ್ಟಾಗಿ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ. ರಾಮಚಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲ್ಲರ್ ಮತ್ತು ಕೋಶಾಧಿಕಾರಿ ಜೋಯಲ್ ದಿಲ್ ರಾಜ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು